ನವದೆಹಲಿ: ಫಿಂಗರ್ ಪ್ರಿಂಟ್ ನಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸಲು ಸಾಧ್ಯವಾಗದೆ ಹೆಚ್ಚಿನ ಸಂಖ್ಯೆಯ ವಿಕಲಚೇತನ ನಾಗರಿಕರು ಆಧಾರ್ ನೋಂದಣಿಯಿಂದ ಹೊರಗುಳಿದಿದ್ದಾರೆ ಎಂಬುದನ್ನು ಸರ್ಕಾರ ಇಂದು ನಿರಾಕರಿಸಿದೆ.
ರಾಜ್ಯಸಭೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ನೀಡಿದ ಲಿಖಿತ ಉತ್ತರದಲ್ಲಿ, ಆಧಾರ್ ನೋಂದಣಿಗಾಗಿ ಬೆರಳಚ್ಚು ನೀಡಲು ಸಾಧ್ಯವಾಗದ ನಿವಾಸಿಗಳು, ಐರಿಸ್ ಸ್ಕ್ಯಾನ್‌ಗಳನ್ನು ಸಂಗ್ರಹಿಸಬಹುದು ಎಂದು ಹೇಳಿದ್ದಾರೆ.
ನಿಯಮಾವಳಿಗಳ ಮೂಲಕ ಪರಿಗಣಿಸಲಾದ ಯಾವುದೇ ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸಲು ಸಾಧ್ಯವಾಗದ ನಿವಾಸಿಗಳು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ನೋಂದಣಿಯಲ್ಲಿ ವಿನಾಯಿತಿಗಳನ್ನು ಸುಗಮಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ದಾಖಲಾತಿ ಸಮಯದಲ್ಲಿ ಸಂಗ್ರಹಿಸಲಾದ ಪ್ರತಿಯೊಂದು ಡೇಟಾವು ದೃಢವಾದ, ಸುಸ್ಥಾಪಿತವಾದ ಡೇಟಾ ಗುಣಮಟ್ಟ ಪರಿಶೀಲನೆ ಕಾರ್ಯವಿಧಾನದ ಮೂಲಕ ಹಾದುಹೋಗಬೇಕು. ಆಧಾರ್ ಡೇಟಾಬೇಸ್ ನ ನಿಖರತೆಯನ್ನು ಸುಧಾರಿಸಲು ಯುಐಡಿಎಐ ನೋಂದಣಿ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ ಎಂದು ಸಚಿವರು ಹೇಳಿದ್ದಾರೆ.