ಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೇ ಇರುವ ಕಾರಣಕ್ಕೆ ದೇಶದ ಪ್ರಧಾನಿಯನ್ನೇ ಕೋರ್ಟಿನ ಕಟಕಟೆಗೆ ಎಳೆದು ತಂದಿದ್ದಾರೆ ಥಾಯ್ಲೆಂಡ್‌ನ ಚಿಯಾಂಗ್ ಮಾಯ್ ನಗರದ ನಿವಾಸಿಗಳು.
ನಗರದಲ್ಲಿ ಮಾಲಿನ್ಯದ ಕಾರಣ ಆವರಿಸುವ ದಟ್ಟ ಧೂಮದ ಹೊದಿಕೆಯ ಕಾರಣ ಇಲ್ಲಿನ ನಿವಾಸಿಗಳ ಸರಾಸರಿ ಆಯುಷ್ಯವು ಐದು ವರ್ಷಗಳಷ್ಟು ತಗ್ಗುತ್ತಿದೆ ಎಂದು ಆಪಾದಿಸಿರುವ ನಗರದ 1,700 ಪ್ರಜೆಗಳು ಏಪ್ರಿಲ್ 10ರಂದು ಥಾಯ್ ಪ್ರಧಾನಿ ಪ್ರಯುತ್ ಚಾನ್-ಓ-ಚಾ, ರಾಷ್ಟ್ರೀಯ ಪರಿಸರ ಮಂಡಳಿ, ಸೆಕ್ಯೂರಿಟಿ ಹಾಗೂ ವಿನಿಮಯ ಸಮಿತಿಯನ್ನು ಆಡಳಿತ ನ್ಯಾಯಾಲಯದ ಕಟಕಟೆಗೆ ತಂದಿದ್ದಾರೆ.
ಇಲ್ಲಿನ ಚಿಯಾಂಗ್ ಮಾಯ್ ವಿವಿಯ ಸಿಬ್ಬಂದಿ ವರ್ಗ, ಕಾರ್ಯಕರ್ತರು ಹಾಗೂ ಪರಿಸರಪ್ರಿಯ ನಗರವಾಸಿಗಳು ಈ ಪ್ರಕರಣ ದಾಖಲಿಸಿದ್ದು, ಮಾಲಿನ್ಯದ ವೈಪರೀತ್ಯಕ್ಕೆ ಕಾಂಟ್ರಾಕ್ಟ್ ಕೃಷಿಯೇ ಕಾರಣ ಎಂದಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಟ್ಟಕ್ಕಿಂತ 66 ಪಟ್ಟು ಹೆಚ್ಚಿನ ಮಾಲಿನ್ಯ ಹೊಂದಿರುವ ಕಾರಣ ಚಿಯಾಂಗ್ ಮಾಯಿ ನಗರವು ಜಗತ್ತಿನ ಅತ್ಯಂತ ಹೆಚ್ಚು ಕಲುಷಿತ ನಗರ ಎಂದು ಕಳೆದ ವಾರ ಘೋಷಿತಗೊಂಡ ಬೆನ್ನಲ್ಲೇ ಈ ಕ್ರಮಕ್ಕೆ ಮುಂದಾಗಿದ್ದಾರೆ ಪ್ರಜೆಗಳು.
ಪಿಎಂ 2.5 ಮಾಲಿನ್ಯಕಾರಕಗಳ ನಿಯಂತ್ರಣಕ್ಕೆ ರಾಷ್ಟ್ರೀಯ ಪರಿಸರ ಮಂಡಳಿ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ದೂರುದಾರರು ಆಪಾದಿಸಿದ್ದಾರೆ. ದೂರುದಾರರಿಗೆ ಬೆಂಬಲ ಸೂಚಿಸಿದ 727 ಮಂದಿ ಅರ್ಜಿಗೆ ಸಹಿ ಮಾಡಿದ್ದು, 980 ಮಂದಿ ಆನ್ಲೈನ್‌ನಲ್ಲಿ ತಮ್ಮ ಬೆಂಬಲ ಸೂಚಿಸಿದ್ದಾರೆ.