ಹಳೆಯ ಮನೆಯೊಂದರಲ್ಲಿ ವಾಸಿಸುತ್ತಿದ್ದ ನಿವಾಸಿಗಳು, ನೆಲದಡಿಯಿಂದ ದೊರೆತ ಹಳೆಯ ಪತ್ರಿಕೆಯೊಂದು ಭೀಕರ ಸತ್ಯವನ್ನು ಬಹಿರಂಗಪಡಿಸಿದ ನಂತರ ರಾತ್ರೋರಾತ್ರಿ ಮನೆಯನ್ನು ತೊರೆದಿದ್ದಾರೆ.
ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಕಥೆಯ ಪ್ರಕಾರ, ಮಹಿಳೆಯೊಬ್ಬರು 1870ರ ಕಾಲದ ಹಳೆಯ ಮನೆಯಲ್ಲಿ ವಾಸಿಸುತ್ತಿದ್ದಾಗ, 1890ರ ಹಳೆಯ ಪತ್ರಿಕೆಯೊಂದು ನೆಲದ ಹಲಗೆಗಳ ಕೆಳಗೆ ಸಿಕ್ಕಿದೆ.
ಪತ್ರಿಕೆಯ ಮುಖಪುಟದಲ್ಲಿ ಕೊಲೆಗಾರನೊಬ್ಬನ ಗಲ್ಲು ಶಿಕ್ಷೆಯ ಬಗ್ಗೆ ಭಯಾನಕ ಲೇಖನವಿತ್ತು. ಇದು ಮನೆಯಲ್ಲಿ ಕೊಲೆಯೊಂದು ನಡೆದಿದೆ ಎಂಬ ಸುಳಿವನ್ನ ನೀಡಿತ್ತು. ಮನೆಯಲ್ಲಿ ಯಾರೂ ಇಲ್ಲದಿದ್ದರೂ, ಕಾಲುಗಳ ಸದ್ದು, ನೆರಳುಗಳು ಕಾಣಿಸಿಕೊಂಡು ಭಯ ಹುಟ್ಟಿಸುತ್ತಿದ್ದವು ಎನ್ನಲಾಗಿದೆ.
ಮಹಿಳೆ ಒಂಟಿಯಾಗಿ ಮನೆಯಲ್ಲಿದ್ದಾಗ ನೆಲಮಾಳಿಗೆಯ ಬಾಗಿಲು ತಾನಾಗಿಯೇ ಮುಚ್ಚಿಕೊಂಡ ಘಟನೆಯನ್ನ ನೆನಪಿಸಿಕೊಂಡಿದ್ದಾರೆ. ಆದರೆ, ಅತ್ಯಂತ ಭಯಾನಕ ಘಟನೆ ನಡೆದಿದ್ದು, ಅವರ ಸ್ನೇಹಿತೆಯ ಕೋಣೆಯ ಬಾಗಿಲ ಬಳಿ ಎತ್ತರದ ವ್ಯಕ್ತಿಯೊಬ್ಬ ನಿಂತಿದ್ದಾಗ. ಕೂಡಲೇ ಅವರುಗಳು ಮನೆಯಿಂದ ಓಡಿಹೋಗಿದ್ದಾರೆ.
“ನನ್ನ ಕೋಣೆ ಮತ್ತು ನನ್ನ ಸ್ನೇಹಿತೆಯ ಕೋಣೆಯ ನಡುವೆ ಸಣ್ಣ ಹಾಲ್ ಇತ್ತು. ನಮ್ಮ ಕೋಣೆಗಳಿಗೆ ಬಾಗಿಲುಗಳಿರಲಿಲ್ಲ. ಒಂದು ದಿನ ಬೆಳಿಗ್ಗೆ ಅಡುಗೆಮನೆಯಲ್ಲಿ, ನನ್ನ ಸ್ನೇಹಿತೆ ನಿನ್ನೆ ರಾತ್ರಿ ಮನೆಯಲ್ಲಿ ಯಾರಾದರೂ ಇದ್ದರಾ ಎಂದು ಕೇಳಿದಳು ? ಇಲ್ಲ, ನಾನು ಒಂಟಿಯಾಗಿದ್ದೆ ಎಂದು ಹೇಳಿದೆ. ಆಗ ಅವಳು ನನ್ನ ಬಾಗಿಲಲ್ಲಿ ಎತ್ತರದ ವ್ಯಕ್ತಿಯೊಬ್ಬ ಇಡೀ ರಾತ್ರಿ ನಿಂತಿರುವುದನ್ನು ನೋಡಿದೆ ಎಂದು ಹೇಳಿದ್ದಳು” ಎಂದು ವಿವರಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಈ ಮನೆಯನ್ನು ದುರಸ್ತಿಗೊಳಿಸಿ ಐಷಾರಾಮಿ ಮನೆಯನ್ನಾಗಿ ಪರಿವರ್ತಿಸಲಾಗಿತ್ತು. ಆದರೆ, ಹೊಸ ಮಾಲೀಕರಿಗೆ ಇದೇ ರೀತಿಯ ಭಯಾನಕ ಅನುಭವವಾಗಿದೆಯೇ ಎಂಬುದು ತಿಳಿದಿಲ್ಲ. ಪ್ರಸ್ತುತ 1891ರ ವಿಕ್ಟೋರಿಯನ್ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆ, ಹಿಂದಿನ ಮನೆಯ ನೆನಪುಗಳು ಇನ್ನೂ ಕಾಡುತ್ತಿವೆ ಎಂದು ಹೇಳಿದ್ದಾರೆ. ಇದೇ ರೀತಿಯ ಅನುಭವವನ್ನು ಹಂಚಿಕೊಂಡ ಮತ್ತೊಬ್ಬ ಬಳಕೆದಾರ, ಹಳೆಯ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುವಾಗ ಅಲ್ಲಿ ನಡೆದ ಕೊಲೆಯ ಬಗ್ಗೆ ಹಳೆಯ ಸುದ್ದಿ ತುಣುಕುಗಳನ್ನು ಕಂಡುಕೊಂಡಿದ್ದಾಗಿ ತಿಳಿಸಿದ್ದಾರೆ.