ಬೆಂಗಳೂರು: ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಲೇಬೇಕು ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಶಾಸಕರ ಭವನದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಮೊದಲು ಸರ್ಕಾರ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಒರಿಸ್ಸಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡದೇ ಚುನಾವಣೆಗಳನ್ನು ನಡೆಸಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಆಗಬಾರದು. ಮೀಸಲಾತಿ ಜಾರಿಗೊಳಿಸಿ ಚುನಾವಣೆ ನಡೆಸಬೇಕು. ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದರು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಲು ಪ್ರತ್ಯೇಕ ಆಯೋಗ ರಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದೇ ವೇಳೆ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ, ಹಿಂದುಳಿದ ವರ್ಗಗಳ ಒಕ್ಕೂಟದ ಮಾಜಿ ಅಧ್ಯಕ್ಷ ಜೆ. ಶ್ರೀನಿವಾಸನ್ ಮೊದಲಾದವರನ್ನು ಸನ್ಮಾನಿಲಸಯಿತು.
ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ. ನಾಗರಾಜ್, ಖಜಾಂಚಿ ಎಲ್.ಎ. ಮಂಜುನಾಥ್, ಸಲಹೆಗಾರರಾದ ಲಿಂಗಪ್ಪ, ನಿವೃತ್ತ ಐಎಎಸ್ ಅಧಿಕಾರಿಗಳಾದ ಪಿ.ಎನ್. ಶ್ರೀನಿವಾಸಾಚಾರಿ. ಕೆ.ಆರ್. ನಿರಂಜನ್, ಕೆ.ಎಸ್.ಪ್ರಭಾಕರ್, ಬಿಜೆಪಿ ಮುಖಂಡ ನೆ.ಲ. ನರೇಂದ್ರ ಬಾಬು ಉಪಸ್ಥಿತರಿದ್ದರು.