ನವದೆಹಲಿ: ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ನೀಡಲಾಗಿದ್ದ ಮೀಸಲಾತಿಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ರಾಜ್ಯ ಸರ್ಕಾರಗಳಿಗೆ ಶೇಕಡಾ 50 ಕ್ಕಿಂತ ಮೀಸಲಾತಿ ಮಿತಿ ಹೆಚ್ಚಿಸುವ ಅಧಿಕಾರವಿಲ್ಲ ಎಂದು ಉನ್ನತ ನ್ಯಾಯಾಲಯ ತೀರ್ಪು ನೀಡಿದ್ದು, ಇದರಿಂದ ರಾಜ್ಯದಲ್ಲಿ ಮೀಸಲಾತಿ ಹೋರಾಟಕ್ಕೆ ಭಾರಿ ಹಿನ್ನಡೆಯಾದಂತಾಗಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಲ್.ಎನ್. ರಾವ್, ಹೇಮಂತ್ ಗುಪ್ತ, ಎಸ್. ರವೀಂದ್ರ ಭಟ್, ಎಸ್. ಅಬ್ದಲ್ ನಜೀರ್ ಅವರುಗಳಿದ್ದ ಸಾಂವಿಧಾನಿಕ ಪೀಠ, ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಮಾತ್ರ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ತೀರ್ಪು ನೀಡಿದೆ.
ಮಂಡಲ್ ತೀರ್ಪು ಮರುಪರಿಶೀಲನೆಗೆ 9 ನ್ಯಾಯಮೂರ್ತಿಗಳ ಪೀಠ ರಚಿಸಬೇಕೆಂಬ ಮನವಿಯನ್ನು ತಿರಸ್ಕರಿಸಲಾಗಿದೆ. ಅನೇಕ ಸಲ ಮಂಡಲ್ ತೀರ್ಪು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದ್ದು, ಇದಕ್ಕೆ ಪೂರಕವಾದ ತೀರ್ಪನ್ನು ನೀಡಲಾಗಿದೆ. ಮತ್ತೊಮ್ಮೆ ಪರಿಶೀಲನೆ ಅಗತ್ಯವಿಲ್ಲವೆಂದು ಹೇಳಲಾಗಿದೆ.
ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಹೊಸ ಪಟ್ಟಿ ಹೊರಡಿಸುವವರೆಗೆ ಹಳೆ ಪಟ್ಟಿ ಮುಂದುವರೆಯಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
102ನೇ ತಿದ್ದುಪಡಿಗೆ ಸಾಂವಿಧಾನಿಕ ಮಾನ್ಯತೆ ಇದೆ. ಆದರೆ ರಾಜ್ಯಗಳು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಅಧಿಕಾರ ಹೊಂದಿಲ್ಲ. ರಾಷ್ಟ್ರಪತಿಗಳಿಗೆ ಮಾತ್ರ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಹೇಳಿದೆ.