ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ. 24ಕ್ಕೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ ರೂಪಿಸಿದ ಶಾಸನವನ್ನು ಸಂವಿಧಾನದ ಶೆಡ್ಯೂಲ್ 9 ರಲ್ಲಿ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಜನಸಂಖ್ಯೆ ಆಧರಿಸಿ ಪರಿಶಿಷ್ಟ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನಕ್ಕೆ ಕಾನೂನು ತೊಡಕು ಉಂಟಾಗದಂತೆ ಸಂವಿಧಾನದ ಶೆಡ್ಯೂಲ್ 9 ಕ್ಕೆ ಸೇರ್ಪಡೆ ಮಾಡುವ ಭರವಸೆಯನ್ನು ಚುನಾವಣೆ ಘೋಷಣೆಗೂ ಮುನ್ನ ರಾಜ್ಯ ಸರ್ಕಾರ ಈಡೇರಿಸಲು ಮುಂದಾಗಿದ್ದು, ಗುರುವಾರ ಕೇಂದ್ರ ಸರ್ಕಾರಕ್ಕೆ ಈ ಕುರಿತಾಗಿ ಶಿಫಾರಸು ಮಾಡಲಾಗಿದೆ.
ಪರಿಶಿಷ್ಟರ ಮೀಸಲಾತಿಯನ್ನು ಒಟ್ಟಾರೆ ಶೇಕಡ 6 ರಷ್ಟು ಏರಿಕೆ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡು ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗಿತ್ತು. ಉಭಯ ಸದನಗಳಲ್ಲಿಯೂ ಸರ್ವಾನುಮತದಿಂದ ಅನುಮೋದನೆ ನೀಡಲಾಗಿದ್ದು, ರಾಜ್ಯಪಾಲರು ಜನವರಿ 11ರಂದು ಒಪ್ಪಿಗೆ ಸೂಚಿಸಿದ್ದರು. ಶಾಸನವನ್ನು ಸಂವಿಧಾನದ ಶೆಡ್ಯೂಲ್ 9 ರಲ್ಲಿ ಸೇರ್ಪಡೆ ಮಾಡಲು ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ವಿಪಕ್ಷಗಳು ಆರೋಪ ಮಾಡಿದ್ದವು.
ಇಂದು ಕಾಂಗ್ರೆಸ್ ನಿಂದ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನವೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ.