ರಾಂಚಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಜಯಗಳಿಸಿದಲ್ಲಿ ಈಗ ಮೀಸಲಾತಿಗೆ ಇರುವ ಗರಿಷ್ಠ ಶೇಕಡ 50ರಷ್ಟು ಮಿತಿಯನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಜಾರ್ಖಂಡ್ ರಾಜ್ಯದಲ್ಲಿ ಭಾರತ್ ಚೋಡೋ ನ್ಯಾಯ ಯಾತ್ರೆ ಅಂಗವಾಗಿ ರಾಂಚಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟ ಜಯಗಳಿಸಿದಲ್ಲಿ ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮೀಸಲಾತಿಗೆ ಶೇಕಡ 50ರಷ್ಟು ಗರಿಷ್ಠ ಮಿತಿಯನ್ನು ಇಂಡಿಯಾ ಒಕ್ಕೂಟ ಕಿತ್ತೊಗೆಯಲಿದೆ. ದಲಿತರು, ಆದಿವಾಸಿಗಳ ಮೀಸಲಾತಿಯಲ್ಲಿ ಕಡಿಮೆ ಮಾಡುವುದಿಲ್ಲ. ಸಮಾಜದ ಹಿಂದುಳಿದ ವರ್ಗಗಳು ತಮ್ಮ ಹಕ್ಕು ಪಡೆಯುತ್ತವೆ ಎಂದು ಹೇಳಿದ್ದಾರೆ.
ಜಾತಿ ಗಣತಿಗೆ ಒತ್ತಾಯ ಕೇಳಿ ಬಂದಾಗ ಅಥವಾ ಒಬಿಸಿಯವರು, ದಲಿತರು, ಬುಡಕಟ್ಟು ಜನರಿಗೆ ಅವರ ಹಕ್ಕುಗಳನ್ನು ನೀಡಬೇಕಾದ ಸಮಯ ಬಂದಾಗ ಪ್ರಧಾನಿ ಮೋದಿ ಜಾತಿಯೇ ಇಲ್ಲ ಎನ್ನುತ್ತಾರೆ. ಆದರೆ, ವೋಟು ಕೇಳುವಾಗ ಮೋದಿ ತಮ್ಮನ್ನು ಒಬಿಸಿ ಎಂದು ಕರೆದುಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.