ನವದೆಹಲಿ: ವಿಕಲಚೇತನ ಉದ್ಯೋಗಿಗಳಿಗೆ ಬಡ್ತಿಯಲ್ಲೂ ಮೀಸಲಾತಿ ಪ್ರಯೋಜನ ನೀಡಲು ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
2016ರ ಸೇವಾ ಮಾನದಂಡದಂತೆ ಬಡ್ತಿಯಲ್ಲಿ ಮೀಸಲು ಜಾರಿಗೆ ಕೇಂದ್ರ ಸಿಬ್ಬಂದಿ ಸಚಿವಾಲಯ ಮಹತ್ವದ ಆದೇಶ ಹೊರಡಿಸಿದೆ. ಅಂಗವಿಕಲ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ಪ್ರಯೋಜನ ಕಲ್ಪಿಸಲು ಅರ್ಹ ಸಿಬ್ಬಂದಿಯನ್ನು 2016ರ ಜೂನ್ 30 ರಿಂದ ಅನ್ವಯವಾಗುವಂತೆ ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.
ಮೀಸಲು ಮೂಲಕ ಬಡ್ತಿ ಪಡೆದ ಅಂಗವಿಕಲರಿಗೆ ಪರಿಷ್ಕೃತ ವೇತನ ಅವರು ಬಡ್ತಿ ಪಡೆದು ಹುದ್ದೆಗೆ ಹಾಜರಾದ ದಿನಾಂಕದಿಂದ ಅನ್ವಯವಾಗಲಿದೆ. ಬಡ್ತಿಗೆ ಸೇವಾ ಹಿರಿತನದ ಮಾನದಂಡ 2016ರ ಜೂನ್ 30 ಆಗಿರುತ್ತೆ. ಈ ಹಂತದಲ್ಲಿ ಸೇವಾ ಹಿರಿತನ ಆಧರಿಸಿ ಅಂಗವಿಕಲರಿಗೆ ಬಡ್ತಿನಿ ನೀಡಿದರೆ ಇತರೆ ಅಧಿಕಾರಿಗಳ ಸೇವಾ ಹಿರಿತನಕ್ಕೆ ಧಕ್ಕೆಯಾಗುವ ಸಾಧ್ಯತೆ ಇದ್ದು, ಗೊಂದಲ ಸೃಷ್ಟಿಯಾಗುತ್ತದೆ. ಇಂತಹ ಗೊಂದಲ ನಿವಾರಿಸಲು ನಿರ್ದಿಷ್ಟ ಅವಧಿಗೆ ವಿಶೇಷ ಸಂದರ್ಭಗಳಲ್ಲಿ ರಚಿಸಲಾದ ಶಾಶ್ವತ ಹುದ್ದೆಗಳು(ಸೂಪರ್ ನ್ಯೂಮರರಿ) ರಚಿಸುವಂತೆ ಸಿಬ್ಬಂದಿ ಸಚಿವಾಲಯದಿಂದ ಸೂಚನೆ ನೀಡಲಾಗಿದೆ. ಇದರಿಂದ ವಿವಿಧ ಶ್ರೇಣಿಗಳ ಅಧಿಕಾರಿಗಳ ಸೇವಾ ಹಿರಿತನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎನ್ನಲಾಗಿದೆ.