ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಆಡಿದ ಮಾತಿನಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ. ಇದರ ಬೆನ್ನಲ್ಲೇ ಪಂಚಮಸಾಲಿ ಅಧ್ಯಯನ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ.
ಸಮುದಾಯದ ಸ್ಥಿತಿಗತಿಯ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸಿಎಂ ಪತ್ರ ಬರೆದಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿಗಳು ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡಿದ್ದಾರೆ. ರಾಜ್ಯದ ಎಲ್ಲಾ ಸಮುದಾಯಗಳ ಒಳಿತಿಗೆ ನಾನು ಬದ್ಧವಾಗಿದ್ದೇನೆ. ಇಂತಹ ಗಂಭೀರ ನಿಯಮಗಳ ಬಗ್ಗೆ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳದೆ ತಜ್ಞರೊಂದಿಗೆ ಸಮಗ್ರವಾಗಿ ಚರ್ಚಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕಾಗುತ್ತದೆ. ಹಾಗಾಗಿ ಈ ನಿಟ್ಟಿನಲ್ಲಿ ನಾನು ಎಲ್ಲರ ಸಹಕಾರ ಕೋರುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ. ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮುಖಂಡರು ಮತ್ತು ಸಮುದಾಯದ ಜನ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.