ಬೆಂಗಳೂರು: ಕೇಂದ್ರ ಸರ್ಕಾರದ ಹುದ್ದೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇಕಡ 10 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಜಾತಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಾತಿಗಳಲ್ಲಿನ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇಕಡ 10 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ಜುಲೈ 22 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನದ ಅನ್ವಯ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. 2019 ರ ಮೇ 14 ರಂದು 144 ಜಾತಿಗಳಿಗೆ ಮಾತ್ರ ಶೇಕಡ 10 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ.
ವಾರ್ಷಿಕ ಆದಾಯ 8 ಲಕ್ಷ ರೂಪಾಯಿಗೂ ಕಡಿಮೆ ಇರುವ ಕುಟುಂಬದ ಅಭ್ಯರ್ಥಿಗಳಿಗೆ ಈ ಸೌಲಭ್ಯ ಸಿಗಲಿದೆ. ಕಂದಾಯ ಇಲಾಖೆಯ ಆಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆದಾಯ ಮತ್ತು ಸ್ವತ್ತು ಪ್ರಮಾಣ ಪತ್ರ ವಿತರಿಸಲಿದ್ದು, ಈ ಸಂದರ್ಭದಲ್ಲಿ ಪಾನ್ ಕಾರ್ಡ್, ಫಾರಂ 16, ಆದಾಯ ತೆರಿಗೆ ಪಾವತಿ ಬಗ್ಗೆ ಪರಿಶೀಲಿಸಲಾಗುವುದು. ಕುಟುಂಬದ ಸದಸ್ಯರ ಬಳಿ ಈ ದಾಖಲೆಗಳು ಇಲ್ಲವೆಂದು ನೋಟರಿಯಿಂದ ಪಡೆದ ಪ್ರಮಾಣಪತ್ರವನ್ನು ಅಭ್ಯರ್ಥಿಗಳು ಸಲ್ಲಿಸಬೇಕು. ಕುಟುಂಬದ ಆದಾಯ ಖಚಿತಪಡಿಸಿಕೊಂಡ ನಂತರ ಪ್ರಮಾಣಪತ್ರ ವಿತರಿಸಬೇಕು.
ಐದು ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಜಮೀನು ಹೊಂದಿರುವವರು, ಒಂದು ಸಾವಿರ ಚದರ ಅಡಿ ಮತ್ತು ಅದಕ್ಕಿಂತ ದೊಡ್ಡ ಫ್ಲಾಟ್ ಇರುವವರು ಅರ್ಹರಲ್ಲ. ನಗರಸಭೆ ವ್ಯಾಪ್ತಿಯಲ್ಲಿ 100 ಚದರ ಅಡಿ, ಅದಕ್ಕಿಂತ ಹೆಚ್ಚು ಮತ್ತು ನಗರಸಭೆ ವ್ಯಾಪ್ತಿಯ ಹೊರಗೆ 200 ಚದರ ಅಡಿ, ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಮನೆ ಹೊಂದಿದ ಕುಟುಂಬದವರು ಮೀಸಲಾತಿ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಹೇಳಲಾಗಿದೆ.