ಬಳ್ಳಾರಿ: ಕರ್ನಾಟಕ ಹಿಂದುಳಿದ ವರ್ಗಗಳ ಜಾತಿ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲದ ಜಾತಿ/ಜನಾಂಗ/ಸಂಘ ಸಂಸ್ಥೆ/ಸಾರ್ವಜನಿಕರಿಂದ ಹಿಂದುಳಿದ ವರ್ಗಗಳ ಜಾತಿ ಮೀಸಲಾತಿ ಪಟ್ಟಿಗೆ ಸೇರಿಸುವ ಕುರಿತು ಮನವಿಗಳನ್ನು ಸ್ವೀಕರಿಸಲಾಗುವುದು.
ಹೊಸ ಕೆನೆಪದರ ಮತ್ತು ಸಂವಿಧಾನದ ಅನುಚ್ಛೇದ 15(4)ರಂತೆ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಮತ್ತು ಅನುಚ್ಛೇದ 16(4) ಮೇರೆಗೆ ನೇಮಕಾತಿಗಳಲ್ಲಿ ಮೀಸಲಾತಿಗಳು ಕುರಿತಂತೆ ಸರಕಾರದ ಆದೇಶದ ಅನ್ವಯ ಹಿಂದುಳಿದ ವರ್ಗಗಳ ಜಾತಿಗಳನ್ನು ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು ಪ್ರವರ್ಗ-ಬಿ ಎಂದು ಪ್ರವರ್ಗವಾರು ವಿಂಗಡಿಸಿ ಶೇಕಡವಾರು ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.
ಕೆಲವು ಕಡಿಮೆ ಅತೀ ಕಡಿಮೆ ಜನಸಂಖ್ಯೆಯುಳ್ಳ ಜಾತಿಗಳು ಹಿಂದುಳಿದ ವರ್ಗಗಳ ಜಾತಿ ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗದೇ ಇರುವುದು ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಗಮನಕ್ಕೆ ಬಂದಿದ್ದು, ಅಂತಹ ಜಾತಿಗಳನ್ನು ಗುರುತಿಸಿ ಜಾತಿ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಿ ಸಾಮಾಜಿಕ ನ್ಯಾಯ ಕಲ್ಪಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಆಯೋಗದ ಮುಖ್ಯ ಉದ್ದೇಶವಾಗಿದೆ. ಇಂತಹ ಜಾತಿ/ಜನಾಂಗಗಳಿಗೆ ಇರುವ ಪರಿಮಿತಿ ಜ್ಞಾನದಿಂದಾಗಿ ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಕೋರಿ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸದೇ ಇರುವುದು ಹಾಗೂ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿರುವುದು ಕಂಡು ಬಂದಿದೆ.
ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಹಿಂದುಳಿದ ಜಾತಿಗಳನ್ನು ಗುರುತಿಸಿ ಅಂತಹ ಜಾತಿ/ಜನಾಂಗಗಳಿಂದ/ಸಂಘ ಸಂಸ್ಥೆಗಳಿಂದ/ಸಾರ್ವಜನಿಕರಿಂದ ಜಾತಿ ಮೀಸಲಾತಿ ಪಟ್ಟಿಗೆ ಸೇರಿಸುವ ಬಗ್ಗೆ ಮನವಿಗಳನ್ನು ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಂ.16.-ಡಿ ಡಿ.ದೇವರಾಜ ಅರಸು ಭವನ,2ನೇ ಮಹಡಿ,ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾ ವಸಂತ ನಗರ,ಬೆಂಗಳೂರು ಇವರಿಗೆ ಕಳುಹಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.