
ಈಜಿಪ್ಟ್‌ನ ಪುರಾತತ್ವಶಾಸ್ತ್ರಜ್ಞರು ಕೆಂಪು ಸಮುದ್ರದ ಪುರಾತನ ಬಂದರು ಬೆರೆನಿಕೆಯಲ್ಲಿ 1,700 ವರ್ಷಗಳಷ್ಟು ಹಳೆಯದಾದ ‘ಗಿಡುಗಗಳ ದೇಗುಲ’ವನ್ನು ಪತ್ತೆ ಮಾಡಿದ್ದಾರೆ. ಆಕರ್ಷಕ ದೇವಾಲಯದ ಪೀಠದ ಮೇಲೆ 15 ತಲೆಯಿಲ್ಲದ ಗಿಡುಗಗಳನ್ನು ಕಾಣಬಹುದಾಗಿದೆ ಮಾತ್ರವಲ್ಲದೇ ಇಬ್ಬರು ದೇವತೆಗಳನ್ನು ಕಲ್ಲಿನಿಂದ ಕೆತ್ತಲಾಗಿದೆ.
ಅಮೆರಿಕನ್ ಜರ್ನಲ್ ಆಫ್ ಆರ್ಕಿಯಾಲಜಿಯ ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಈ ದೇವಾಲಯ ಮತ್ತು ಸ್ಮಾರಕದ ವಿವರಗಳ ಕುರಿತು ಮಾಹಿತಿ ನೀಡಲಾಗಿದೆ.
ಈ ದೇವಾಲಯದ ಒಂದು ಕೊಠಡಿಯಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಗ್ರೀಕ್ ಶಾಸನವಿರುವ ಕಂಬವನ್ನು ಕಂಡುಹಿಡಿದಿದ್ದಾರೆ. ಸಮೀಪದಲ್ಲಿಯೇ 34 ಸೆಂಟಿಮೀಟರ್ ಉದ್ದವಿರುವ ಈಟಿ ಕೂಡ ಸಿಕ್ಕಿದೆ. ಶಾಸನದ ಮೇಲೆ ‘ಇಲ್ಲಿ ತಲೆಯನ್ನು ಕುದಿಸುವುದು ಸರಿಯಲ್ಲ’ ಎಂದು ಬರೆಯಲಾಗಿದೆ.
ಇಲ್ಲಿ ಸಿಕ್ಕಿರುವ ಕಂಬದ ಮೇಲೆ ಮೂರು ದೇವರುಗಳನ್ನು ಕೆತ್ತಲಾಗಿದ್ದು, ಅವುಗಳಲ್ಲಿ ಒಂದು ಹಾರ್ಪೋಕ್ರೇಟ್ಸ್ ಆಫ್ ಕೊಪ್ಟೋಸ್ – ಬಾಲ ದೇವರು ಎಂದು ಗುರುತಿಸಲಾಗಿದ್ದು, ಉಳಿದೆರಡು ದೇವತೆಗಳ ಬಗ್ಗೆ ವಿವರ ಪತ್ತೆ ನಡೆಸಲಾಗುತ್ತಿದೆ. ಗಿಡುಗಗಳ ಶಿರಚ್ಛೇದದ ಹಿಂದಿನ ಕಾರಣ ಮಾತ್ರ ನಿಗೂಢವಾಗಿದ್ದು, ಸಂಶೋಧನೆ ಮುಂದುವರೆದಿದೆ.