alex Certify ಸತತ 14 ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ಏಕೈಕ ರಾಜ್ಯ ಕರ್ನಾಟಕ: ಈ ಬಾರಿ ಗಣರಾಜ್ಯೋತ್ಸವದಲ್ಲಿ ‘ನಾರಿ ಶಕ್ತಿ’ ಅನಾವರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತತ 14 ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ಏಕೈಕ ರಾಜ್ಯ ಕರ್ನಾಟಕ: ಈ ಬಾರಿ ಗಣರಾಜ್ಯೋತ್ಸವದಲ್ಲಿ ‘ನಾರಿ ಶಕ್ತಿ’ ಅನಾವರಣ

ನವದೆಹಲಿ: ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತ್ರೀ ಸಬಲೀಕರಣವನ್ನು ಪ್ರತಿಬಿಂಬಿಸುವ ‘ನಾರಿ ಶಕ್ತಿʼ ಸ್ತಬ್ಧಚಿತ್ರವು ಸಂಪೂರ್ಣವಾಗಿ ಸಿದ್ಧಗೊಂಡಿದೆ. ನಾಡಿನ ಹೆಮ್ಮೆಯ ಪ್ರತೀಕವಾಗಿರುವ ಸ್ತಬ್ಧಚಿತ್ರವು ಜನವರಿ 26 ರಂದು  ರಾಜಧಾನಿಯ ಕರ್ತವ್ಯ ಪಥದಲ್ಲಿ(ರಾಜ್‌ಪಥ್) ಸಾಗುವುದರೊಂದಿಗೆ ಕರ್ನಾಟಕ ಹಿರಿಮೆಯ ಕೀರ್ತಿ ಪತಾಕೆಯನ್ನು ಹಾರಿಸಲಿದೆ. ಇದರೊಂದಿಗೆ ಸತತವಾಗಿ ಹದಿನಾಲ್ಕು ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯವೆಂಬ ಶ್ರೇಯವನ್ನು ಕರ್ನಾಟಕ ತನ್ನದಾಗಿಸಿಕೊಳ್ಳಲಿದೆ.

ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರವು ಕರ್ನಾಟಕ ರಾಜ್ಯದ ಪಾಲಿಗೆ ಅತ್ಯಂತ ಸ್ಮರಣೀಯವಾದುದು. ಹಲವು ಅಡೆ ತಡೆಗಳನ್ನು ಎದುರಿಸಿ, ಕೊನೆಯ ಹಂತದಲ್ಲಿ ರಾಜ್ಯವು ಪಥ ಸಂಚಲನಕ್ಕೆ ರಹದಾರಿ ಪಡೆದುಕೊಂಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ತಬ್ಧಚಿತ್ರವನ್ನು ಸಿದ್ಧಪಡಿಸುವ ಸವಾಲನ್ನು ಹಿಮ್ಮೆಟ್ಟಿಸಿ ಅಚ್ಚರಿಯ ರೀತಿಯಲ್ಲಿ ಸಿದ್ಧಗೊಂಡಿದೆ. ಕರ್ನಾಟಕದ ಹಿರಿಮೆ ಮತ್ತು ಕನ್ನಡ ಅಸ್ಮಿತೆಯ ಪ್ರತೀಕದಂತಿರುವ ಈ ಸ್ತಬ್ಧಚಿತ್ರವು ಕೇವಲ 10 ದಿನಗಳಲ್ಲಿ ರೂಪುಗೊಂಡಿದೆ. ಸ್ತಬ್ಧಚಿತ್ರದ ವೈಶಿಷ್ಟಪೂರ್ಣತೆಯಿಂದಲೇ ಗಮನ ಸೆಳೆಯುವ ಕರ್ನಾಟಕ ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಲೇ ಸಾಗಿದೆ.

‘ವಾರ್ತಾ ಇಲಾಖೆಯು ದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಪರವಾಗಿ ಸ್ತಬ್ಧಚಿತ್ರದೊಂದಿಗೆ ಪ್ರತಿ ಬಾರಿಯೂ ಪಾಲ್ಗೊಳ್ಳುತ್ತದೆ. ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರದಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಅಲ್ಲದೆ, ಇಲಾಖೆಯು ಕಳೆದ 14 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿದೆ. ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ಇಲಾಖೆಯ ಆಯುಕ್ತರಾದ ಡಾ. ಪಿ.ಎಸ್. ಹರ್ಷ ಹೇಳಿದ್ದಾರೆ.

2023ರಂದು ನಡೆಯುವ ಗಣರಾಜ್ಯೋತ್ಸವದ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು  1. ಕರ್ನಾಟಕದ ಮಹಿಳೆಯರ ಶೌರ್ಯ, 2. “ರೇಷ್ಮೆ” ಕರ್ನಾಟಕದ ಹೆಮ್ಮೆ 3. ಕರ್ನಾಟಕದ ಪುಷ್ಪೋದ್ಯಮ 4. ಕರ್ನಾಟಕ : ಸಿರಿಧಾನ್ಯದ ನಾಯಕ ಮತ್ತು 5. ʼನಾರಿ ಶಕ್ತಿʼ ಎಂಬ ಐದು ವಿಷಯಗಳನ್ನು ಆಯ್ಕೆ ಮಾಡಿಕಳುಹಿಸಿತ್ತು. ಇದರಲ್ಲಿ ಸ್ತ್ರೀ ಸಬಲೀಕರಣವನ್ನು ಬಿಂಬಿಸುವ ʼನಾರಿ ಶಕ್ತಿʼ ವಿಷಯವನ್ನು ʼವಿಷಯ ಆಯ್ಕೆಯ ಪರಿಣತರ ತಂಡʼವು ಅಂತಿಮಗೊಳಿಸಿತ್ತು. ಅದಕ್ಕನುಗಣವಾಗಿ ಈ ಬಾರಿಯ ಸ್ತಬ್ಧಚಿತ್ರದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ಮೂವರು ಮಹಿಳಾ ಸಾಧಕಿಯರ ಸಾಧನೆಯನ್ನು ಪ್ರದರ್ಶಿಸುತ್ತಿರುವುದಾಗಿ ಆಯುಕ್ತರು ತಿಳಿಸಿದರು.

`ಆಜಾದಿ ಕ ಅಮೃತ ಮಹೋತ್ಸವʼದ ಅಂಗವಾಗಿ ಸೂಲಗಿತ್ತಿ ನರಸಮ್ಮ, ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಮತ್ತು ಸಾಲುಮರದ ತಿಮ್ಮಕ್ಕ ಅವರುಗಳ ಸಾಧನೆಗಳನ್ನು ‘ನಾರಿ ಶಕ್ತಿ'(ವುಮನ್ ಪವರ್) ಹೆಸರಿನಲ್ಲಿ ರಾಜ್ಯವು 2023ರ ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ ಪ್ರಸ್ತುತ ಪಡಿಸಿದೆ. ಇವರುಗಳು ಸಮಾಜಕ್ಕೆ ನೀಡಿದ ನಿಸ್ವಾರ್ಥ ಕೊಡುಗೆಗಾಗಿ ಕೇಂದ್ರ ಸರ್ಕಾರ ‘ಪದ್ಮ ಶ್ರೀ’ ಪುರಸ್ಕಾರದಿಂದ ಗೌರವಿಸಿದೆ. ಕರ್ನಾಟಕದ ಅತಿ ಹಿಂದುಳಿದ ಹಳ್ಳಿಗಳಲ್ಲಿ, ಸಾಮಾನ್ಯ ಕುಟುಂಬಗಳಲ್ಲಿ ಹುಟ್ಟಿ ಬೆಳೆದರೂ ಇವರುಗಳ ಸಾಧನೆಗೆ ಅವರ ಹುಟ್ಟು – ಜಾತಿ – ಅಂತಸ್ತು ಯಾವುದು ಅಡ್ಡ ಬಂದಿಲ್ಲ. ತಮ್ಮ ಸಾಧನೆಗಳ ಮೂಲಕವೇ ಜಾಗತಿಕವಾಗಿ ಗಮನ ಸೆಳೆದವರು. ಇವರ ಸಾಧನೆಗಾಗಿ ಕರ್ನಾಟಕ ಮತ್ತು ದೇಶವೇ ಹೆಮ್ಮೆಪಡುತ್ತದೆ. ಇದನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸ್ತಬ್ಧಚಿತ್ರವನ್ನು ರೂಪಿಸಿದೆ ಎಂದು ಅವರು ನುಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...