ಬೆಂಗಳೂರು: ಗಣರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಣರಾಜ್ಯೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಗಣರಾಜ್ಯೋತ್ಸವದ ದಿನದಂದು ಬಾಂಬ್ ಬೆದರಿಕೆಯೊಡ್ಡಿದ್ದ ಅನಾಮಧೇಯ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬೆಂಗಳೂರು ನಗರದ ವಿವಿಧೆಡೆ ಬಾಂಬ್ ಸ್ಫೋಟವಾಗಲಿದೆ ಎಂದು ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿ, ಆರು ಜನರ ಹೆಸರು ಹಾಗೂ ವಿಳಾಸವನ್ನು ತಿಳಿಸಿ, ಈ ಹಿಂದೆ ರಾಮೇಶ್ವರಂ ಕೆಫೆಯಲ್ಲಿ ನಡೆದಂತೆ ಬೆಂಗಳೂರಿನ ವಿವಿಧೆಡೆಗಳಲ್ಲಿ ಬಾಂಬ್ ಸ್ಫೋಟಿಸಲು ಆರು ಜನರು ಗಣರಾಜ್ಯೋತ್ಸವದ ದಿನ ಬಾಂಬ್ ಸ್ಫೋಟಿಸಲು ಮುಂದಾಗಿದ್ದಾರೆ ಎಂದು ಹೇಳಿದ್ದಾನೆ.
ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್ ಕರೆ ಎಂದು ಕಂಡುಬಂದಿದೆ. ಪೊಲೀಸ್ ಕಂಟ್ರೋಲ್ ರೂಮ್ ಪಿಎಸ್ ಐ ಓರ್ವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅಪರಿಚಿತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.