alex Certify BIG NEWS: ಅಂಬೇಡ್ಕರ್ ಗೆ ಅವಮಾನ ಮಾಡಿಲ್ಲ: ನ್ಯಾ. ಮಲ್ಲಿಕಾರ್ಜುನಗೌಡ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಂಬೇಡ್ಕರ್ ಗೆ ಅವಮಾನ ಮಾಡಿಲ್ಲ: ನ್ಯಾ. ಮಲ್ಲಿಕಾರ್ಜುನಗೌಡ ಸ್ಪಷ್ಟನೆ

ರಾಯಚೂರು: ಸಂವಿಧಾನ ಶಿಲ್ಪಿ ಹಾಗೂ ಭಾರತ ರತ್ನ ಡಾ.ಬಿ.ಅರ್.ಅಂಬೇಡ್ಕರವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಅಭಿಮಾನ ಇದೆ ಎಂದು ರಾಯಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನ ಆಚರಣೆ ಮಾಡುತ್ತಾ ಬಂದಿದ್ದು, ಆ ಸಮಯದಲ್ಲಿ ನಾನು ಅಂತಹ ಮಹಾನ್ ವ್ಯಕ್ತಿತ್ವ, ತತ್ವ, ಆದರ್ಶ ಮತ್ತು ನಡೆ ನುಡಿಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಅಂತಾ ವಿನಂತಿಸಿಕೊಂಡಿರುತ್ತೇನೆ. ಅಂತಹ ಮಹಾನ್ ವ್ಯಕ್ತಿಗೆ ನಾನು ಯಾವತ್ತು ಅಗೌರವ ತೋರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಬಗ್ಗೆ ಯಾವ ಉದ್ದೇಶ ಇಟ್ಟುಕೊಂಡು ಆ ರೀತಿ ಅಪಪ್ರಚಾರ ಮಾಡಿದ್ದಾರೆ ಅಂತಾ ನನಗೆ ತಿಳಿಯದಾಗಿದೆ. ಕಾರಣ ಆ ವದಂತಿ ಸುಳ್ಳಾಗಿದ್ದು ಅದನ್ನು ನಂಬಬೇಡಿ ಅಂತಾ ಎಲ್ಲರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಜ.26ರಂದು(ಬುಧವಾರ) ಬೆಳಗ್ಗೆ 8:30 ಕ್ಕೆ ನಮ್ಮ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಉಚ್ಚ ನ್ಯಾಯಾಲಯದವರು ನೀಡಿದ ಎಸ್.ಒ.ಪಿ. ಪ್ರಕಾರ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ, ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಒಟ್ಟು 200 ಜನರಿಗೆ ಮೀರದಂತೆ ಸೇರಿ ಗಣರಾಜ್ಯೋತ್ಸವ ಆಚರಿಸಲು ನಿರ್ಣಯಿಸಿ ನೋಟಿಸು ನೀಡಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಆದರೆ ಜ.26ರಂದು ಮುಂಜಾನೆ 8.15ರ ಸುಮಾರಿಗೆ ನಮ್ಮ ಸಿಬ್ಬಂದಿಯವರು ನನ್ನ ಕೊಠಡಿಗೆ ಬಂದು ಕೆಲವು ವಕೀಲರು ಮಹಾತ್ಮ ಗಾಂಧಿಯವರ ಫೋಟೋದ ಜೊತೆ ಡಾ.ಬಿ.ಆರ್.ಅಂಬೇಡ್ಕರ ರವರ ಫೊಟೊವನ್ನು ಸಹ ಇಟ್ಟು ಗಣರಾಜೋತ್ಸವ ಆಚರಿಸಬೇಕೆಂದು ಸರ್ಕಾರದ ಸುತ್ತೋಲೆ ಇದೆ ಅಂತಾ ಹೇಳುತ್ತಿದ್ದಾರೆ ಅಂತಾ ತಿಳಿಸಿದರು. ನಂತರ ಕೆಲ ವಕೀಲರು ಬಂದು ನನಗೆ ಸರ್ಕಾರದ ಸುತ್ತೋಲೆಯ ಪ್ರಕಾರ ಡಾ. ಬಿ.ಆರ್. ಅಂಬೇಡ್ಕರ್ ರವರ ಫೋಟೋವನ್ನು ಇಟ್ಟು ಗಣರಾಜೋತ್ಸವ ಆಚರಿಸಬೇಕು ಅಂತಾ ಒತ್ತಾಯಿಸಿದರು. ಆಗ ನಾನು ಆ ಸುತ್ತೋಲೆಯನ್ನು ಘನ ಉಚ್ಚನ್ಯಾಯಾಲಯದ ಫುಲ್ ಕೋರ್ಟ್ ಮುಂದೆ ಪರಿಗಣೆನೆಗೆ ಇರುವ ಕಾರಣ ನಾವು ಕಾಯಬೇಕು ಅಂತಾ ಉಚ್ಚ ನ್ಯಾಯಾಲಯದ ವಿಲೇಖನಾಧಿಕಾರಿಗಳು ನಮ್ಮ ಲೀಡರ್ಸ್ ಗುಂಪಿನಲ್ಲಿ ತಿಳಿಸಿದ್ದಾರೆ. ಆದ ಕಾರಣ ಒತ್ತಾಯಿಸಬೇಡಿ ಅಂತಾ ವಿನಂತಿಸಿಕೊಂಡೆ. ಅದೇ ಸಮಯದಲ್ಲಿ ರಾಯಚೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ. ಬಸವರಾಜ ವಕೀಲರು ಬಂದು ಅವರಿಗೆ ವಿಲೇಖನಾಧಿಕಾರಿಗಳ ಸೂಚನೆಯ ಬಗ್ಗೆ ತಿಳಿಸಿ ಹೇಳಿ ಹೊರಗೆ ಕರೆದುಕೊಂಡು ಹೋದರು ಎಂದು ಅವರು ತಮ್ಮ ಪತ್ರಿಕಾ ಸ್ಪಷ್ಟನೆಯಲ್ಲಿ ವಿವರಿಸಿದ್ದಾರೆ.

ನಮ್ಮ ಸಿಬ್ಬಂದಿ ನನಗೆ ಹೊರಗಡೆ ಬಹಳ ಜನ ಸೇರಿದ್ದಾರೆ ಅಂತಾ ತಿಳಿಸಿದರು. ನಂತರ ನಮ್ಮ ಸಿಬ್ಬಂದಿಗೆ ಹೊರಗಡೆಯಿಂದ ಬಂದಿರುವ ಬೇರೆ ಜನರು ಹೊರಗೆ ಹೋಗಿದ್ದಾರೆ, ತಾವು ಧ್ವಜಾರೋಹಣಕ್ಕೆ ಬರಬಹುದು ಅಂತಾ ತಿಳಿಸಿದ ನಂತರ ನಾನು ನಮ್ಮ ಎಲ್ಲಾ ನ್ಯಾಯಾಧೀಶರನ್ನು ಕರೆದುಕೊಂಡು ಧ್ವಜಾರೋಹಣಾ ಸ್ಥಳಕ್ಕೆ ಹೋಗಿ ಧ್ವಜಾರೋಹಣ ನೆರವೇರಿಸಿರುತ್ತೇನೆ ಎಂದು ಅವರು ವಿವರಿಸಿದ್ದಾರೆ.

ಯಾವುದೇ ವ್ಯಕ್ತಿಗಳು ಡಾ.ಬಿ.ಆರ್.ಅಂಬೇಡ್ಕರವರ ಫೋಟೋ ತೆಗೆದುಕೊಂಡು ಬಂದು ಇಟ್ಟಿದ್ದನ್ನು ಮತ್ತು ತೆಗೆದುಕೊಂಡು ಹೋಗಿರುವುದನ್ನು ನಾನು ನೋಡಿರುವುದಿಲ್ಲ. ಈ ಸತ್ಯ ಘಟನೆಯನ್ನು ಮರೆಮಾಚಿ ನಾನು ಅವರಿಗೆ ಡಾ.ಬಿ.ಆರ್. ಅಂಬೇಡರವರ ಫೋಟೊ ತೆಗೆದರೆ ಮಾತ್ರ ಧ್ವಜಾರೋಹಣಕ್ಕೆ ಬರುತ್ತೇನೆ ಅಂತಾ ಅಪಪ್ರಚಾರ ಮಾಡಿರುತ್ತಾರೆ”ಎಂದು ಅವರು ತಮ್ಮ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...