ಬಾಗಲಕೋಟೆ: ಖಾಸಗಿ ಚಾನಲ್ ವರದಿಗಾರ ಎಂದು ಹೇಳಿಕೊಂಡು ಓಡಾಡುವ ವ್ಯಕ್ತಿಯೊಬ್ಬ ಬಿಜೆಪಿ ಕಾರ್ಯಕರ್ತೆಗೆ ಅಶ್ಲೀಲ ಫೋಟೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಬಂದೆನವಾಜ್ ಸರಕಾವಸ್ ಎಂಬಾತ ತಾನು ಖಾಸಗಿ ಸುದ್ದಿವಾಹಿನಿ ವರದಿಗಾರ ಎಂದು ಹೇಳಿಕೊಂಡು ಜಮಖಂಡಿ ಬಿಜೆಪಿ ನಗರ ಮಂಡಳ ಅಧ್ಯಕ್ಷೆ, ಖಾಸಗಿ ಶಾಲಾ ಶಿಕ್ಷಕಿ ಗೀತಾ ಸೂರ್ಯವಂಶಿ ಎಂಬುವವರಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಬೆದರಿಕೆ ಹಾಕುತ್ತಿದ್ದಾನಂತೆ.
ಗೀತಾ ಸೂರ್ಯವಂಶಿ ಅವರ ಭಾವಚಿತ್ರದ ಕಣ್ಣಿಗೆ ಕಪ್ಪುಪಟ್ಟಿ ಅಂಟಿಸಿ ಬಳಿಕ ಅದನ್ನು ಅಶ್ಲೀಲ ಫೋಟೋ, ವಿಡಿಯೋಗೆ ಹಾಕಿ ಎಡಿಟ್ ಮಾಡಿ ಅದಕ್ಕೆ ಬಿಜೆಪಿ ಕಾರ್ಯಕರ್ತೆಯ ರಾಸಲೀಲೆ ಎಂದು ಅಡಿಬರಹ ಕೊಟ್ಟಿದ್ದಾನೆ. ಅಲ್ಲದೇ ಅಸಂಬದ್ಧ ಹಾಡನ್ನೂ ಎಡಿಟ್ ಮಾಡಿ ಗೀತಾ ಅವರಿಗೆ ಕಳುಹಿಸಿದ್ದಾನಂತೆ. ಬಳಿಕ ಗೀತಾ ಅವರಿಗೆ ಕರೆ ಮಾಡಿ ನಾನು ಖಾಸಗಿ ಸುದ್ದಿವಾಹಿನಿ ವರದಿಗಾರ. ನನ್ನ ಬಳಿ ನಿಮ್ಮ ರಾಸಲೀಲೆ ವಿಡಿಯೋ ಇದ್ದು, ವೈರಲ್ ಮಾಡಬಾರದು ಎಂದರೆ ನನ್ನನ್ನು ಭೇಟಿಯಾಗಿ, ಹಣ ನೀಡುವಂತೆ ಬೇದಿಕೆ ಇಟ್ಟಿದ್ದಾನೆ. ಈ ಬಗ್ಗೆ ಗೀತಾ ಸೂರ್ಯವಂಶಿ ಜಮಖಂಡಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.