
ನವದೆಹಲಿ: ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡ 0.25 ರಷ್ಟು ಇಳಿಕೆ ಮಾಡಿದ್ದು, ಫೆಬ್ರವರಿ 15 ರಿಂದಲೇ ಜಾರಿಗೆ ಬಂದಿದೆ.
ಫೆಬ್ರವರಿ 7ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರೆಪೊ ದರವನ್ನು ಶೇಕಡ 0.25 ರಷ್ಟು ಕಡಿತಗೊಳಿಸಿ ಶೇಕಡ 6.25ಕ್ಕೆ ಇಳಿಕೆ ಮಾಡಿದ ಬೆನ್ನಲ್ಲೇ ಅನೇಕ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸಿವೆ. ಇದೀಗ ಎಸ್.ಬಿ.ಐ. ಕೂಡ ಗೃಹ, ವಾಹನ, ವೈಯಕ್ತಿಕ, ವಾಣಿಜ್ಯ ಸಾಲದ ಮೇಲಿನ ಬಡ್ಡಿ ದರಗಳನ್ನು ಕಡಿಮೆ ಮಾಡಿದೆ. ಗ್ರಾಹಕರ ಮಾಸಿಕ ಇಎಂಐ ಮೊತ್ತದಲ್ಲಿ ಇಳಿಕೆಯಾಗಲಿದೆ.
ಆರ್‌ಬಿಐ ರೆಪೊ ದರ ಕಡಿತಗೊಳಿಸಿದ ಬೆನ್ನಲ್ಲೇ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ಬಡ್ಡಿ ದರ ಇಳಿಕೆ ಮಾಡಿದ್ದವು. ಇದೀಗ ಎಸ್‌ಬಿಐ ಕೂಡ ಬಡ್ಡಿ ದರ ಇಳಿಕೆ ಮಾಡಿ ರೆಪೊ ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದೆ.