
ನವದೆಹಲಿ: ಜನವರಿಯಲ್ಲಿ ಹಣದುಬ್ಬರ ಪ್ರಮಾಣ ಶೇಕಡ 5.22ರಿಂದ ಶೇಕಡ 4.31 ಕ್ಕೆ ಇಳಿಕೆಯಾಗಿದೆ. 4 ತಿಂಗಳ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೊತ್ತುಪಡಿಸಿದ ಶೇಕಡ 4ಕ್ಕೆ ಹಣದುಬ್ಬರ ಪ್ರಮಾಣ ಸಮೀಪಿಸುತ್ತಿರುವಂತೆ ಕಾಣುತ್ತಿದೆ.
ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ಬೆಳವಣಿಗೆಗಳನ್ನು ಗಮನಿಸಿದರೆ ಹಣದುಬ್ಬರ ಇಳಿಕೆಯ ಸೂಚನೆಗಳು ದಟ್ಟವಾಗಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಿರುವ ರೆಪೊ ದರವನ್ನು ಮತ್ತಷ್ಟು ಇಳಿಕೆ ಮಾಡುವ ಸೂಚನೆಗಳಿವೆ ಎಂದು ಮೋತಿಲಾಲ್ ಓಸ್ವಾಲ್ ಮ್ಯೂಚುವಲ್ ಫಂಡ್ ವರದಿ ತಿಳಿಸಿದೆ.
ಫೆಬ್ರವರಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಹೆಚ್ಚು ಕುಸಿತ ದಾಖಲಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ಚಲನೆ ಕಂಡುಬಂದಿದೆ. ಅಮೆರಿಕದ ಹಣದುಬ್ಬರ ಶೇಕಡ 2.9 ರಿಂದ 3ಕ್ಕೆ ಏರಿಕೆಯಾಗಿದೆ. ಇಂತಹ ಬೆಳವಣಿಗೆ ನಡುವೆಯೂ ಭಾರತದ ಪರಿಸ್ಥಿತಿ ಚೇತರಿಸಿಕೊಳ್ಳಲಿದೆ. ಮೂಲ ಸೌಕರ್ಯ ತಯಾರಿಕಾ ವಲಯದಲ್ಲಿ ಸರ್ಕಾರ ಮತ್ತು ಖಾಸಗಿ ಹೂಡಿಕೆ ಹೆಚ್ಚಳವಾಗಲಿದೆ.
ರಿಯಲ್ ಎಸ್ಟೇಟ್ ವಲಯ ಮತ್ತಷ್ಟು ಏರಿಕೆ ಕಾಣಲಿದೆ. ನವೀಕರಿಸಬಹುದಾದ ಇಂಧನ, ಉನ್ನತ ತಂತ್ರಜ್ಞಾನ ಸ್ಥಳೀಕರಣದಿಂದ ವಿದೇಶಿ ನೇರ ಹೂಡಿಕೆ ಬಲವಾಗಲಿದೆ ಎಂದು ವರದಿ ಹೇಳಿದೆ. ಆರ್‌ಬಿಐ ಮತ್ತೊಮ್ಮೆ ರೆಪೊ ದರ ಕಡಿತಗೊಳಿಸಿದಲ್ಲಿ ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿ ದರ ಇಳಿಕೆಯಾಗಲಿದ್ದು, ಸಾಲಗಾರರಿಗೆ ಇಎಂಐ ಹೊರೆ ಕಡಿಮೆಯಾಗಿ ಅನುಕೂಲವಾಗಲಿದೆ.