ನವದೆಹಲಿ: 28 ವರ್ಷದ ಗಾಯಕಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲಿನಲ್ಲಿರುವ ಮಾಜಿ ಶಾಸಕ ವಿಜಯ್ ಮಿಶ್ರಾಗೆ ಕೋರ್ಟ್ 15 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ವಿಜಯ್ ಮಿಶ್ರಾ ಅವರಿಗೆ ಭದೋಹಿಯ ವಿಶೇಷ ಸಂಸದ/ಶಾಸಕ ನ್ಯಾಯಾಲಯ ಇಂದು 15 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಜ್ಞಾನಪುರದಿಂದ ನಾಲ್ಕು ಬಾರಿ ಶಾಸಕರಾಗಿದ್ದ ಮಿಶ್ರಾ ಪ್ರಸ್ತುತ ಆಗ್ರಾ ಜೈಲಿನಲ್ಲಿದ್ದಾರೆ. “ವಿಜಯ್ ಮಿಶ್ರಾ ಅವರನ್ನು ಐಪಿಸಿ ಸೆಕ್ಷನ್ 376-2 (ಎನ್) ಅಡಿಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. ಆದರೆ ಕೋರ್ಟ್ ಮಿಶ್ರಾ ಅವರ ಮಗ ವಿಷ್ಣು ಮತ್ತು ಅವರ ಸೋದರಳಿಯ ಜ್ಯೋತಿ ಅವರನ್ನು ದೋಷಮುಕ್ತಗೊಳಿಸಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಈ ಪ್ರಕರಣವು 2020 ರ ಹಿಂದಿನದಾಗಿದ್ದು, ಸಂತ್ರಸ್ತೆ ಮಾಜಿ ಶಾಸಕ, ಅವರ ಮಗ ಮತ್ತು ಅವರ ಸೋದರಳಿಯನ ವಿರುದ್ಧ ಭದೋಹಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 2014ರಲ್ಲಿ ಮಿಶ್ರಾ ತನ್ನ ಮನೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತನ್ನನ್ನು ಕರೆದು ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ತನ್ನ ಮೇಲೆ ಅತ್ಯಾಚಾರ ಎಸಗಿದ ನಂತರ, ಮಿಶ್ರಾ ತನ್ನ ಮಗ ಮತ್ತು ಸೋದರಳಿಯನಿಗೆ ಅವಳನ್ನು ಮನೆಗೆ ಬಿಡುವಂತೆ ಹೇಳಿದನು, ಆದರೆ ಅವರು ಸಹ ಮನೆಗೆ ಹೋಗುವಾಗ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.