
ನವದೆಹಲಿ: ಪತ್ನಿ ಪದೇ ಪದೇ ತನ್ನ ಪತಿಯ ಮನೆ ಬಿಟ್ಟು ಹೋಗುವುದು ಮಾನಸಿಕ ಕ್ರೌರ್ಯ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪತಿಯ ಯಾವುದೇ ತಪ್ಪು ಇಲ್ಲದಿದ್ದರೂ ಪತ್ನಿ ಪದೇ ಪದೇ ಮನೆ ಬಿಟ್ಟು ಹೋಗುವುದು. ದೀರ್ಘ ಕಾಲ ದೂರವಿರುವುದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಿಚ್ಛೇಧನ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿಯೊಬ್ಬ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ಪ್ರಕರಣದಲ್ಲಿ ವಿವಾಹವಾಗಿ 19 ವರ್ಷಗಳಾಗಿದ್ದರೂ ಪತ್ನಿ 7 ಬಾರಿ ಪತಿಯಿಂದ ದೀರ್ಘ ಕಾಲ ದೂರವಿದ್ದಾರೆ. ಪ್ರತಿ ಬಾರಿಯೂ 3-10 ತಿಂಗಳವರೆಗೆ ಪತಿಯನ್ನು ತೊರೆದಿದ್ದಾರೆ ಎಂಬುದನ್ನು ಕೋರ್ಟ್ ಗಮನಿಸಿದೆ.
ಪರಸ್ಪರ ಬೆಂಬಲ, ಭಕ್ತಿ ಮತ್ತು ನಿಷ್ಠೆಯ ವಾತಾವರಣದಲ್ಲಿ ವಿವಾಹವು ಅರಳುತ್ತದೆ. ದೂರ, ಪ್ರತ್ಯೇಕತೆ ಸಂಬಂಧ ಸರಿಪಡಿಸಲಾಗದ ಸ್ಥಿತಿ ತಲುಪುತ್ತದೆ. ಸಹಬಾಳ್ವೆ, ವೈವಾಹಿಕ ಸಂಬಂಧಗಳನ್ನು ನಿಲ್ಲಿಸುವುದು ಅಥವಾ ವಂಚಿಸುವುದು ಕೂಡ ಕ್ರೌರ್ಯ. ಪತಿಯ ಮನೆಗೆ ಬರಲು ಯಾವುದೇ ಗಂಭೀರ ರಾಜೀ ಪ್ರಯತ್ನಗಳನ್ನು ಮಾಡದ ಕಾರಣ ಪತ್ನಿ ವೈವಾಹಿಕ ಸಂಬಂಧಗಳಲ್ಲಿ ಮುಂದುವರೆಯುವ ಉದ್ದೇಶವನ್ನು ಹೊಂದಿಲ್ಲ ಎಂಬುದನ್ನು ತೋರುತ್ತದೆ. ಹೀಗಾಗಿ ಈ ಪ್ರಕರಣದಲ್ಲಿ ಪತಿ ವಿಚ್ಛೇಧನ ಪಡೆಯಲು ಅರ್ಹರಾಗಿದ್ದಾರೆ ಎಂದು ತೀರ್ಪು ನೀಡಿದ ದೆಹಲಿ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿದೆ.