ಬೆಂಗಳೂರು: ನಟ ದರ್ಶನ್ & ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 160ಕ್ಕೂ ಹೆಚ್ಚು ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಈ ನಡುವೆ ತನಿಖೆ ಇನ್ನಷ್ಟು ಚುರುಕುಗೊಳಿಸಿರುವ ತನಿಖಾಧಿಕರಿಗಳು ಆದಾಯ ತೆರಿಗೆ ಇಲಾಖೆ ಹಾಗೂ ಇನ್ ಸ್ಟಾಗ್ರಾಂಗೆ ಪತ್ರ ಬರೆದಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆದಾಯ ತೆರಿಗೆ ಇಲಖೆಗೆ ಪತ್ರ ಬರೆದಿದ್ದಾರೆ. ಪ್ರಕರಣದಲ್ಲಿ 70 ಲಕ್ಷಕ್ಕೂ ಅಧಿಕ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಓರ್ವ ವ್ಯಕ್ತಿ 10 ಲಕ್ಷ ನಗದು ಹಣ ಮಾತ್ರ ಹೊಂದಲು ಅವಕಾಶವಿದೆ. ಅದಕ್ಕಿಂತ ಹೆಚ್ಚು ಹಣ ದೊರೆತಲ್ಲಿ ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಬೇಕು ಎಂಬ ನಿಯಮವಿದೆ. ಹಾಗಾಗಿ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಕೊಲೆ ಕೇಸ್ ಮುಚ್ಚಿ ಹಾಕಲು ಆರೋಪಿಗಳಿಗೆ 30 ಲಕ್ಷ ನೀಡಲಾಗಿತ್ತು ಎನ್ನಲಾದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ನಟ ದರ್ಶನ್ ಮನೆಯಲ್ಲಿ 37.40 ಲಕ್ಷ ನಗದು ಹಣ ಪತ್ತೆಯಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ದರ್ಶನ್ 3 ಲಕ್ಷ ನೀಡಿದ್ದರು ಎನ್ನಲಾಗಿದ್ದು, ಈ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಐಟಿ ಇಲಾಖೆಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಇನ್ನು ರೇಣುಕಾಸ್ವಾಮಿ ಇನ್ ಸ್ಟಾಗ್ರಾಂ ಪೋಸ್ಟ್ ಬಗ್ಗೆ ತನಿಖೆಗೆ ಸಹಾಯ ಕೋರಿ ಕಾಮಾಕ್ಷಿ ಪಾಳ್ಯ ಪೊಲೀಸರು ಇನ್ ಸ್ಟಾಗ್ರಾಂಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.