ದಾವಣಗೆರೆ: ನನ್ನ ಮೇಲಿನ ದ್ವೇಷದಿಂದ ನಮ್ಮ ಕುಟುಂಬದ ಪುತ್ರ ಚಂದ್ರಶೇಖರನನ್ನು ಬಲಿ ಪಡೆದಿದ್ದಾರೆ ಇದೊಂದು ವ್ಯವಸ್ಥಿತ ಕೊಲೆ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
ಚಂದ್ರಶೇಖರ್ ಮೃತದೇಹ ದೊರೆತ ನಂತರ ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ ಈ ರೀತಿ ಗಂಭೀರ ಆರೋಪ ಮಾಡಿದ್ದಾರೆ.
ಇದೊಂದು ಕೊಲೆ ಎಂಬುದು ನಮಗೆ ಆರಂಭದಿಂದಲೂ ಅನುಮಾನವಿತ್ತು ಎಂದು ಚಂದ್ರಶೇಖರ್ ದೊಡ್ಡಪ್ಪ ವಿಶ್ವರಾಧ್ಯ ಹೇಳಿದ್ದಾರೆ. ರೇಣುಕಾಚಾರ್ಯ ಅವರ ಮೇಲಿನ ರಾಜಕೀಯ ದ್ವೇಷದಿಂದ ಕೊಲೆ ಮಾಡಲಾಗಿದೆ. ಚಂದ್ರಶೇಖರ್ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕಿದೆ. ನಾಪತ್ತೆಯಾದ ಬಳಿಕ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ. ಅದರಲ್ಲೂ ಕಾರಿನ ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ಚಂದ್ರಶೇಖರ್ ದೊಡ್ಡಪ್ಪ ವಿಶ್ವಾರಾಧ್ಯ ಹೇಳಿದ್ದಾರೆ.
ನಾಳೆ ಮಧ್ಯಾಹ್ನ 3 ಗಂಟೆಗೆ ಚಂದ್ರಶೇಖರ್ ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ
ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್(24) ಅ.30 ರಂದು ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡಿ ಪೂಜೆಯ ನಂತರ ಭಕ್ತರಿಗೆ ಖುದ್ದಾಗಿ ಊಟ ಬಡಿಸಿದ್ದರು. ಸ್ನೇಹಿತ ಕಿರಣ್ ಕೂಡ ಚಂದ್ರಶೇಖರ್ ಜೊತೆಗೆ ಹೋಗಿದ್ದರು. ಆಶ್ರಮದಿಂದ ವಾಪಸ್ ಆಗುವಾಗ ಕಿರಣ್ ಶಿವಮೊಗ್ಗದಲ್ಲಿ ಇಳಿದುಕೊಂಡಿದ್ದರು. ನ್ಯಾಮತಿ ಬಳಿ ಚಂದ್ರಶೇಖರ್ ಕಾರ್ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ನಂತರ ನಾಪತ್ತೆಯಾಗಿದ್ದ ಅವರು ಇಂದು ಶವವಾಗಿ ಪತ್ತೆಯಾಗಿದ್ದಾರೆ.