ಬೆಂಗಳೂರು: ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ನಾಯಕತ್ವ ಬದಲಾವಣೆ ಮಾಡಲು ಹೋದವರಿಗೆ, ಬ್ಲಾಕ್ಮೇಲ್ ಮಾಡಿದವರಿಗೆ ಮಂತ್ರಿಗಿರಿ ನೀಡಲಾಗಿದೆ ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ನಾಯಕರ ಭೇಟಿಗೆ ಸಮಯ ಕೇಳಿಲ್ಲ. ಸಿಕ್ಕ ನಾಯಕರನ್ನು ಭೇಟಿ ಮಾಡಿ ಮಾತನಾಡಿಕೊಂಡು ಬರುತ್ತೇನೆ. ನನಗೆ ಸಚಿವ ಸ್ಥಾನ ಬೇಕೆಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ, ಮೋದಿಯವರ ಮುಖ ನೋಡಿ ಜನ ಬೆಂಬಲ ನೀಡಲಾಗಿದೆ. ಯೋಗೀಶ್ವರ್ ಮುಖ ನೋಡಿ ಮುಖ ನೋಡಿ ಬೆಂಬಲ ನೀಡಿಲ್ಲ. ಪಕ್ಷಕ್ಕೆ, ಸರ್ಕಾರಕ್ಕೆ ಯೋಗೇಶ್ವರ್ ಕೊಡುಗೆ ಏನು? ಯೋಗೇಶ್ವರ್ ಅವರ ಕ್ಷೇತ್ರದಲ್ಲಿಯೇ ಸೋತಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಲೋಕಸಭೆ ಎಲೆಕ್ಷನ್ ಗೆ ಬೇರೆಯವರನ್ನು ನಿಲ್ಲಿಸಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರು. ರಾಮನಗರ ಉಪಚುನಾವಣೆಗೂ ನಿಲ್ಲದೆ ಫಿಕ್ಸಿಂಗ್ ಮಾಡಿಕೊಂಡಿದ್ದರು. ಮೆಗಾಸಿಟಿ ದೊಡ್ಡ ಹಗರಣ ನಡೆಸಿದ್ದಾರೆ. ನಮ್ಮ ನಾಯಕರನ್ನು ಭೇಟಿಯಾಗಿ ಹಗರಣದ ಬಗ್ಗೆ ದೂರು ನೀಡುವೆ. ಮೆಗಾಸಿಟಿ ಹಗರಣದ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ಸಮಯ ಬಂದಾಗ ಅವೆಲ್ಲವನ್ನು ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಆರಕ್ಕೂ ಹೆಚ್ಚು ಬಾರಿ ಗೆದ್ದವರನ್ನು ಬಿಟ್ಟು ಇವರಿಗೆ ಸಚಿವ ಸ್ಥಾನ ನೀಡಲಾಗಿದೆ. ನಾಯಕತ್ವ ಬದಲಾವಣೆಗೆ ಮೊಗಸಾಲೆಯಲ್ಲಿ ಓಡಾಡುತ್ತಿದ್ದರು, ಶಾಸಕರಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಿದವರಿಗೆ ಮಣೆ ಹಾಕಿರುವುದು ನೋವಾಗಿದೆ. ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆಯಾಗಲಿ, ಪಕ್ಷ ಸಂಘಟನೆ ವಿರುದ್ಧವಾಗಲಿ ಮಾತನಾಡುವುದಿಲ್ಲ. ಇಂದು ಮತ್ತು ನಾಳೆ ದೆಹಲಿಯಲ್ಲಿ ನಾಯಕರನ್ನು ಭೇಟಿ ಮಾಡುತ್ತೇನೆ. ನಮ್ಮ ನಾಯಕರನ್ನು ಭೇಟಿಯಾಗಿ ದೂರು ನೀಡುತ್ತೇನೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.