*ರಂಜಿತ್ ಶೃಂಗೇರಿ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರ ಜಾಮೀನು ಅರ್ಜಿಯ ಕುರಿತಾದ ತೀರ್ಪನ್ನು ಹೈಕೋರ್ಟ್ ಬುಧವಾರ ಇಂದು ಪ್ರಕಟಿಸಿದೆ. ಹೌದು. ನಟ ದರ್ಶನ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
1 ವಾರದಲ್ಲಿ ಚಿಕಿತ್ಸೆಯ ವಿವರಗಳನ್ನು ಕೋರ್ಟ್ ಗೆ ನೀಡಬೇಕು ಎಂದು ಹೈಕೋರ್ಟ್ ನ ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ. ಜಾಮೀನು ಸಿಕ್ಕ ಹಿನ್ನೆಲೆ ನಟ ದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ. ಸುಮಾರು 131 ದಿನಗಳ ಬಳಿ ‘ದಾಸ’ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕ ಸದಸ್ಯ ಪೀಠದಲ್ಲಿ ಮಂಗಳವಾರ ದರ್ಶನ್ ಸಲ್ಲಿಸಿದ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ನಡೆಸಲಾಗಿತ್ತು. ಕೆಲಕಾಲ ವಾದ ಆಲಿಸಿದ ನ್ಯಾಯಪೀಠ ಬುಧವಾರಕ್ಕೆ ಆದೇಶ ಕಾಯ್ದಿರಿಸಿತ್ತು.
ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ ವಾದ ಮಂಡಿಸಿದ್ದರು. ಆರೋಗ್ಯ ಸಮಸ್ಯೆಯನ್ನ ಮುಂದಿಟ್ಟುಕೊಂಡು ವಕೀಲರು ವಾದ ಮಂಡಿಸಿದ್ದರು. ಡಿ.ಕೆ ಶಿವಕುಮಾರ್ ಪ್ರಕರಣ ಉಲ್ಲೇಖಿಸಿ ಜಾಮೀನು ವಾದ ಮಂಡಿಸಿದರು. ಡಿಕೆ ಶಿವಕುಮಾರ್ ಅವರಿಗಿದ್ದ ಆರೋಗ್ಯ ಸಮಸ್ಯೆಗಿಂತ ಇದು ಬಹಳ ಗಂಭೀರವಾಗಿದೆ. ಬೆನ್ನು ಹುರಿಯ ಸಮಸ್ಯೆಯಿಂದ ಕಾಲು ಮರಗಟ್ಟುವಿಕೆ ಆಗುತ್ತಿದೆ. ಹೀಗೆ ಆದರೆ ಮುಂದೊಂದು ದಿನ ಬಹಳ ದೊಡ್ಡ ಸಮಸ್ಯೆಗೆ ಕಾರಣ ಆಗುತ್ತದೆ. ಡಿಸ್ಕ್ ನಲ್ಲಿ ಆದ ಸಮಸ್ಯೆಯಿಂದ ರಕ್ತ ಪರಿಚಲನೆ ಆಗುತ್ತಿಲ್ಲ. ಇದು ನಾರ್ಮಲ್ ಟ್ರೀಟ್ ಮೆಂಟ್ ಆಗಲ್ಲ, ಹೀಗಾಗಿ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಆದ್ದರಿಂದ ಇದನ್ನು ಪರಿಗಣಿಸಿ ದರ್ಶನ್ ಗೆ ಜಾಮೀನು ನೀಡಬೇಕು ಎಂದು ವಾದ ಮಂಡಿಸಿದರು.
ಆರೋಗ್ಯದ ದೃಷ್ಟಿಯಿಂದ ನಟ ದರ್ಶನ್ ಗೆ ಜಾಮೀನು ನೀಡಬೇಕೆಂದು ವಕೀಲ ಸಿವಿ ನಾಗೇಶ್ ಮನವಿ ಮಾಡಿದ್ದಾರೆ.ಇದಕ್ಕೆ ಪ್ರತಿಕ್ರಿಯೆ ನೀಡಿದ ಹೈಕೋರ್ಟ್ ಜಡ್ಜ್ ಮುಂದೆ ಸಮಸ್ಯೆ ಆದರೆ ಅದನ್ನು ಸರಿಪಡಿಸಲಾಗುವುದಿಲ್ಲ , ವಿಚಾರಣಾಧೀನ ಕೈದಿಗೂ ಉತ್ತಮ ಆರೋಗ್ಯದ ಹಕ್ಕಿದೆ . ಚಿಕಿತ್ಸೆ ಪಡೆಯುವುದು ವ್ಯಕ್ತಿಯ ಮೂಲಭೂತ ಹಕ್ಕು ಎಂದರು. ನೀವು ಎಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತೀರಾ ಎಂದು ಜಡ್ಜ್ ಲಾಯರ್ ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸಿವಿ ನಾಗೇಶ್ ‘ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತೇವೆ ಎಂದು ಹೇಳಿದರು.
ಬಳ್ಳಾರಿ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ ಬೆನ್ನುನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ನಟ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್, ದರ್ಶನ್ ಗೆ ಡಿಸ್ಕ್ ಸಮಸ್ಯೆಯಿದೆ. ತಕ್ಷಣ ಸರ್ಜರಿ ಅಗತ್ಯವಿದೆ. ಸರ್ಜರಿ ಮಾಡಿಸದಿದ್ದಲ್ಲಿ ದರ್ಶನ್ ಕಾಲಿಗೆ ಪಾರ್ಶ್ವವಾಯು ಆಗುವ ಸಾಧ್ಯತೆ ಇದೆ. ಹಾಗಾಗಿ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದ್ದರು.