ಬೆಂಗಳೂರು: ಖ್ಯಾತ ನೇತ್ರ ತಜ್ಞ ಹಾಗೂ ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ಕೆ. ಭುಜಂಗ ಶೆಟ್ಟಿ(69) ಹೃದಯಾಘಾತದಿಂದ ಶುಕ್ರವಾರ ಸಂಜೆ ನಿಧನರಾಗಿದ್ದಾರೆ.
ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಎಂದಿನಂತೆ ಕರ್ತವ್ಯ ಮುಗಿಸಿದ ಅವರು ಸಂಜೆ ಮನೆಗೆ ತೆರಳಿದ್ದಾರೆ. ಮನೆಯಲ್ಲಿ ಜಿಮ್ ಮಾಡಿದ ನಂತರ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಹೃದಯಾಘಾತ ಸಂಭವಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ನಾರಾಯಣ ನೇತ್ರಾಲಯದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ನಂತರ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು.
ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಭುಜಂಗ ಶೆಟ್ಟಿ ಅವರು ನೇತ್ರಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನವಾಗಿ ನೀಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ವರ ನಟ ಡಾ. ರಾಜಕುಮಾರ್, ಡಾ. ಪುನೀತ್ ರಾಜಕುಮಾರ್ ಸೇರಿದಂತೆ ಹಲವರ ನೇತ್ರದಾನ ಪ್ರಕ್ರಿಯೆಯಲ್ಲಿ ಭುಜಂಗಶೆಟ್ಟಿ ಪಾತ್ರ ವಹಿಸಿದ್ದರು. ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಿದ್ದರು. ಸಾವಿರಾರು ಅಂಧರಿಗೆ ದೃಷ್ಟಿ ಮರಳಲು ನೆರವಾಗಿದ್ದರು. ಸಾವಿರಾರು ಮಂದಿ ನೇತ್ರದಾನಕ್ಕೆ ನೋಂದಾಯಿಸಿಕೊಳ್ಳುವ ಮೂಲಕ ಹೊಸ ಕ್ರಾಂತಿ ಮೂಡಿಸಿದ್ದರು.
1978 ರಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ್ದ ಅವರು 1982ರ ವೇಳೆಗೆ ಬೆಂಗಳೂರಿನ ವೈದ್ಯಕೀಯ ಕಾಲೇಜಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನೇತ್ರ ಶಾಸ್ತ್ರದ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ನಂತರ ಸ್ವಂತ ಚಿಕಿತ್ಸಾಲಯ ಶುರು ಮಾಡಿದ್ದರು. ರಾಜಾಜಿನಗರದಲ್ಲಿ 1993ರ ವೇಳೆಗೆ ನಾರಾಯಣ ನೇತ್ರಾಲಯ ಹೆಸರಿನಲ್ಲಿ ಕಾರ್ಪೊರೇಟ್ ಮಾದರಿ ಆಸ್ಪತ್ರೆ ನಿರ್ಮಿಸಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಅಳಿಸಲಾರದ ಸಾಧನೆ ಮಾಡಿದ್ದಾರೆ. ಅವರ ನಿಧನಕ್ಕೆ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.