ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜಡೆ ಗ್ರಾಮದ ಹೆಸರನ್ನು ಐತಿಹಾಸಿಕ ಹಾಗೂ ಪುರಾಣಗಳಲ್ಲಿ ದಾಖಲಾಗಿರುವಂತೆ ‘ಜಟಾಯುಪುರ’ ಎಂದು ಮರುನಾಮಕರಣ ಮಾಡಲು ಗ್ರಾಮಸ್ಥರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸೋಮವಾರದಂದು ಜಡೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿದಾನಂದ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಈ ಸಂದರ್ಭದಲ್ಲಿ ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು, ಸೀತೆಯನ್ನು ರಾವಣ ಅಪಹರಿಸಿಕೊಂಡು ಆಕಾಶ ಮಾರ್ಗವಾಗಿ ಸಂಚರಿಸುವಾಗ ಜಟಾಯು ಪಕ್ಷಿ ರಾವಣನನ್ನು ತಡೆಯುತ್ತದೆ. ಈ ವೇಳೆ ಆತ ತನ್ನ ಖಡ್ಗದಿಂದ ಪಕ್ಷಿಯ ಒಂದು ರೆಕ್ಕೆ ಕತ್ತರಿಸಿದ್ದು, ಆಗ ಜಟಾಯು ಪಕ್ಷಿ ರೆಕ್ಕೆ ಬಿದ್ದ ಸ್ಥಳವೇ ‘ಜಟಾಯುಪುರ’ ವಾಯಿತು ಎಂದು ಮಾಹಿತಿ ನೀಡಿದರು.
ಕದಂಬರ ಆಡಳಿತದಲ್ಲಿ ಜಡೆಯನ್ನು ಜಟಾಯುಪುರ ಎಂದೇ ಕರೆಯಲಾಗುತ್ತಿತ್ತು. ಹೀಗಾಗಿ ಮುಂದಿನ ಪೀಳಿಗೆಗೆ ಸ್ಥಳ ಮಹಿಮೆ ಮತ್ತು ಇತಿಹಾಸ ತಿಳಿಸುವ ಸಲುವಾಗಿ ಜಡೆ ಗ್ರಾಮವನ್ನು ಈ ಮೊದಲಿನಂತೆ ಜಟಾಯುಪುರ ಎಂದು ಮರುನಾಮಕರಣ ಮಾಡಲು ಆಗ್ರಹಿಸಲಾಯಿತು.