ಕೊರೊನಾ ಲಸಿಕೆ ಪ್ರಮಾಣ ಪತ್ರದಿಂದ ಪ್ರಧಾನಿ ಮೋದಿ ಫೋಟೋವನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಇದೊಂದು ಅಪಾಯಕಾರಿ ಪ್ರಸ್ತಾಪ ಎಂದು ಬಣ್ಣಿಸಿದೆ.
ಪೀಟರ್ ಮಯಾಲಿಪರಂಬಿಲ್ ಕೊಟ್ಟಾಯಂ ಎಂಬವರು ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ ಮುದ್ರಿಸಿರುವುದನ್ನು ವಿರೋಧಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಎನ್ ನಾಗರೇಶ್ ಈ ವಿಚಾರಣೆ ಕೈಗೆತ್ತಿಕೊಂಡಿದ್ದರು.
ಅರ್ಜಿದಾರ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಮೂರ್ತಿ ನಾಗರೇಶ್, ಇದೊಂದು ಅತ್ಯಂತ ಭಯಾನಕ ಪ್ರಸ್ತಾವನೆಯಾಗಿದೆ. ನಾಳೆ ಇನ್ಯಾರೋ ಬಂದು ನಮಗೆ ಮಹಾತ್ಮಾ ಗಾಂಧಿಯವರನ್ನು ಕಂಡರೆ ಆಗೋದಿಲ್ಲ. ಹೀಗಾಗಿ ಅವರ ಫೋಟೋವನ್ನು ನೋಟಿನ ಮೇಲೆ ಮುದ್ರಿಸಬೇಡಿ ಎಂದು ಹೇಳಬಹುದು ಎಂದು ಕಳವಳ ವ್ಯಕ್ತಪಡಿಸಿದ್ರು.
ನ್ಯಾಯಮೂರ್ತಿಗಳ ಈ ಮಾತಿಗೆ ಸಮರ್ಥನೆ ನೀಡಿದ ಅರ್ಜಿದಾರರ ಪರ ವಕೀಲ, ಮಹಾತ್ಮಾ ಗಾಂಧಿ ಅವರ ಫೋಟೋವನ್ನು ಆರ್ಬಿಐ ನಿಯಮವಾಳಿಯಂತೆಯೇ ನೋಟಿನಲ್ಲಿ ಮುದ್ರಿಸಲಾಗುತ್ತಿದೆ. ಆದರೆ ಪ್ರಧಾನಿ ಮೋದಿ ಫೋಟೋ ಲಸಿಕೆ ಪ್ರಮಾಣ ಪತ್ರದಲ್ಲಿ ಮುದ್ರಿಸಲು ಯಾವುದೇ ನಿಯಮಾವಳಿಗಳಿಲ್ಲ ಎಂದು ಹೇಳಿದ್ರು.
ಈ ಸಂಬಂಧ ತನ್ನ ಹೇಳಿಕೆಯನ್ನು ತಿಳಿಸಲು ಕೇಂದ್ರ ಸರ್ಕಾರದ ಕೌನ್ಸಿಲ್ ಸಮಯಾವಕಾಶ ಕೇಳಿದ್ದರಿಂದ ಕೋರ್ಟ್ ಈ ವಿಚಾರಣೆಯನ್ನು ನವೆಂಬರ್ 23ಕ್ಕೆ ಮುಂದೂಡಿದೆ.