ಪ್ರಸ್ತುತ ದಿನಮಾನಗಳ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಎಲ್ಲ ಕ್ಷೇತ್ರಗಳಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಕೃತಕ ಬುದ್ಧಿಮತ್ತೆ ಬಳಕೆ ವ್ಯಾಪಕವಾಗುತ್ತಿದ್ದು, ಐಟಿ ಕ್ಷೇತ್ರದಲ್ಲಿ ಬಹಳಷ್ಟು ಉದ್ಯೋಗಗಳನ್ನು ಕಬಳಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ಮಾನವ ಭಾಷಾಂತರಕಾರರ ಕುರಿತು ಕೃತಕ ಬುದ್ಧಿಮತ್ತೆ ಕಂಪನಿಯೊಂದರ ಸಿಇಒ ಮಹತ್ವದ ಮಾಹಿತಿ ನೀಡಿದ್ದಾರೆ.
ಈಗಾಗಲೇ ಈ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯಿಂದ ಕಾರ್ಯ ನಿರ್ವಹಿಸುವ ತಂತ್ರಜ್ಞಾನ ಬಳಸುವ ಪ್ರಯತ್ನಗಳು ನಡೆದಿದ್ದು ಮುಂದಿನ ಮೂರು ವರ್ಷಗಳಲ್ಲಿ ಮಾನವನ ಸಹಕಾರವಿಲ್ಲದೆ ಭಾಷಾಂತರವನ್ನು ಕೃತಕ ಬುದ್ಧಿಮತ್ತೆಯೇ ಮಾಡಲಿದೆ ಎಂದು ಹೇಳಲಾಗಿದೆ. Widn.AI 32 ಭಾಷೆಗಳ ಭಾಷಾಂತರವನ್ನು ಮಾಡುವಂತೆ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಹೊಸ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಕಾರ್ಯನಿರ್ವಹಿಸುವ ಇದು ಮಾನವನ ಸಹಾಯವಿಲ್ಲದೆ ಭಾಷಾಂತರ ಮಾಡುವ ಕಾರ್ಯ ನಿರ್ವಹಿಸುತ್ತದೆ ಎಂದು Widn.AI ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾಸ್ಕೋ ಪೆಟ್ರೋ ಅವರನ್ನು ಉಲ್ಲೇಖಿಸಿ ಸಿಎನ್‌ಬಿಸಿ ವರದಿ ಮಾಡಿದೆ.
LLM (large language model) ಎಂದು ಕರೆಯಲ್ಪಡುವ ಈ ತಂತ್ರಜ್ಞಾನವು ಮಾನವನಂತೆಯೇ ಹಲವು ಭಾಷೆಗಳ ಅಕ್ಷರವನ್ನು ಅರ್ಥಮಾಡಿಕೊಳ್ಳಬಹುದಾಗಿದ್ದು, ಈ ಮೂಲಕ ಭಾಷಾಂತರವನ್ನು ನೆರವೇರಿಸುತ್ತದೆ ಎನ್ನಲಾಗಿದೆ. ಆರಂಭಿಕ ಹಂತದಲ್ಲಿ 32 ಭಾಷೆಗಳನ್ನು ಭಾಷಾಂತರ ಕಾರ್ಯವನ್ನು ಇದು ಮಾಡಲಿದ್ದು ಮುಂದಿನ ಮೂರು ವರ್ಷಗಳಲ್ಲಿ ಇದು ಬಳಕೆಗೆ ಬರುವ ನಿರೀಕ್ಷೆ ಇದೆ.
ಎಲ್ಲ ಕ್ಷೇತ್ರಗಳಲ್ಲೂ ಈಗ ಕೃತಕ ಬುದ್ಧಿಮತ್ತೆ ಬಳಕೆಗೆ ಬರುತ್ತಿದ್ದು, ಮಾನವ ಸಮಯವನ್ನು ಉಳಿಸುವ ಕಾರ್ಯ ಮಾಡುತ್ತದೆಯಾದರೂ ಮಾನವರ ಉದ್ಯೋಗವನ್ನು ಕಬಳಿಸಲಿದೆ. ಈಗ ಭಾಷಾಂತರ ಕ್ಷೇತ್ರಕ್ಕೂ ಇದು ಕಾಲಿಡತೊಡಗಿದ್ದು, ಅಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ.