ಚೆನ್ನೈ: ಪತ್ನಿ ಮಂಗಳಸೂತ್ರ ತೆಗೆದಿರುವುದು ಪತಿ ಮೇಲಾದ ಮಾನಸಿಕ ಕ್ರೌರ್ಯ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಪತ್ನಿ ಮಂಗಳಸೂತ್ರ ತೆಗೆದರೆ ಅದು ಪತಿಯನ್ನು ಮಾನಸಿಕ ಕ್ರೌರ್ಯಕ್ಕೆ ಒಳಪಡಿಸುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಗಮನಿಸಿದ್ದು, ನೊಂದ ವ್ಯಕ್ತಿಗೆ ವಿಚ್ಛೇದನ ನೀಡಿದೆ.
ಇತ್ತೀಚೆಗೆ ಈರೋಡ್ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿ. ಶಿವಕುಮಾರ್ ಅವರ ಸಿವಿಲ್ ಮೇಲ್ಮನವಿಯನ್ನು ಅನುಮತಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ವಿ.ಎಂ. ವೇಲುಮಣಿ ಮತ್ತು ಎಸ್. ಸೌಂಥರ್ ಅವರ ವಿಭಾಗೀಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ತನಗೆ ವಿಚ್ಛೇದನ ನೀಡಲು ನಿರಾಕರಿಸಿ ಸ್ಥಳೀಯ ಕೌಟುಂಬಿಕ ನ್ಯಾಯಾಲಯದ ಜೂನ್ 15, 2016ರ ಆದೇಶಗಳನ್ನು ರದ್ದುಗೊಳಿಸುವಂತೆ ಶಿವಕುಮಾರ್ ಕೋರಿದ್ದರು.
ವಿಚಾರಣೆ ವೇಳೆ ಪತ್ನಿ, ಪ್ರತ್ಯೇಕತೆ ಸಮಯದಲ್ಲಿ ತಾಳಿ ಸರ ತೆಗೆದಿರುವುದನ್ನು ಒಪ್ಪಿಕೊಂಡಳು. ಆಕೆಯ ಪರ ವಕೀಲರು, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ಉಲ್ಲೇಖಿಸಿ, ತಾಳಿ ಕಟ್ಟುವ ಅಗತ್ಯವಿಲ್ಲ ಎಂದು ಹೇಳಿದ್ದು, ಹೆಂಡತಿ ತಾಳಿ ತೆಗೆದುಹಾಕುವುದು ನಿಜವಾಗಿದ್ದರೂ ವೈವಾಹಿಕ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಈ ಭಾಗದಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ತಾಳಿ ಕಟ್ಟುವುದು ಅತ್ಯಗತ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ವಿಭಾಗೀಯ ಪೀಠದ ಆದೇಶಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ದಾಖಲೆಯಲ್ಲಿ ಲಭ್ಯವಿರುವ ಮಾಹಿತಿಗಳಿಂದ ಅರ್ಜಿದಾರರು ತಾಳಿ ತೆಗೆದಿರುವುದು ಕಂಡುಬರುತ್ತದೆ. ಯಾವುದೇ ಹಿಂದೂ ವಿವಾಹಿತ ಮಹಿಳೆ ತನ್ನ ಗಂಡನ ಜೀವಿತಾವಧಿಯಲ್ಲಿ ಯಾವುದೇ ಸಮಯದಲ್ಲಿ ತಾಳಿ ತೆಗೆಸುವುದಿಲ್ಲ ಎಂಬುದು ತಿಳಿದಿರುವ ಸತ್ಯ. ಮಹಿಳೆಯ ಕುತ್ತಿಗೆಯಲ್ಲಿರುವ ತಾಳಿ ವೈವಾಹಿಕ ಜೀವನದ ನಿರಂತರತೆಯನ್ನು ಸಂಕೇತಿಸುವ ಪವಿತ್ರ ವಸ್ತುವಾಗಿದೆ. ಅದನ್ನು ಗಂಡನ ಮರಣದ ನಂತರವೇ ತೆಗೆದುಹಾಕಲಾಗುತ್ತದೆ. ಆದ್ದರಿಂದ, ಇದನ್ನು ಮಾನಸಿಕ ಕ್ರೌರ್ಯ ಬಿಂಬಿಸುವ ಕೃತ್ಯ ಎಂದು ಹೇಳಬಹುದು. ಇದು ಸಂಕಟ ಉಂಟುಮಾಡಬಹುದು ಮತ್ತು ಪ್ರತಿವಾದಿಯ ಭಾವನೆಗಳಿಗೆ ಧಕ್ಕೆ ತರಬಹುದು ಎಂದು ಪೀಠ ಹೇಳಿದೆ.
ತನ್ನ ಮಹಿಳಾ ಸಹೋದ್ಯೋಗಿಗಳೊಂದಿಗೆ ಪತಿ ವಿರುದ್ಧ ವಿವಾಹೇತರ ಸಂಬಂಧದ ಆರೋಪಗಳನ್ನು ಪತ್ನಿ ಮಾಡಿದ್ದಾಳೆ ಎಂದು ಪೀಠ ಗಮನಿಸಿದೆ. ಪತ್ನಿಯು ಪತಿಗೆ ಮಾನಸಿಕ ಕ್ರೌರ್ಯವನ್ನುಂಟುಮಾಡಿದ್ದಾಳೆ ಎಂದು ಹೇಳಲು ಯಾವುದೇ ಹಿಂಜರಿಕೆಯಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಮೇಲ್ಮನವಿದಾರ ಮತ್ತು ಅವರ ಪತ್ನಿ 2011 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ಅವಧಿಯಲ್ಲಿ ಪತ್ನಿ ಪುನರ್ಮಿಲನಕ್ಕೆ ಯಾವುದೇ ಪ್ರಯತ್ನವನ್ನು ಮಾಡಿದ್ದಾರೆ ಎಂಬುದನ್ನು ತೋರಿಸಲು ಯಾವುದೇ ದಾಖಲೆಗಳಿಲ್ಲ ಎಂದು ಪೀಠ ಹೇಳಿದ್ದು, ಅರ್ಜಿದಾರರ ನಡುವಿನ ವಿವಾಹವನ್ನು ವಿಸರ್ಜಿಸುವ ತೀರ್ಪು ನೀಡುವ ಮೂಲಕ ವೈವಾಹಿಕ ಸಂಬಂಧಕ್ಕೆ ಪೂರ್ಣ ವಿರಾಮ ಹಾಕಲು ನಾವು ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದೆ. ನವೆಂಬರ್, 2008 ರಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ್ದು, ಅರ್ಜಿದಾರರಿಗೆ ವಿಚ್ಛೇದನ ನೀಡಿದೆ.