1907ರ ಆ. 22ರಂದು ಜರ್ಮನಿಯ ಸ್ಟಟ್ ಗಾರ್ಟ್‍ನಲ್ಲಿ ಭಾರತದ ಧ್ವಜ ಹಾರಾಡಿತ್ತು. ಮಾನವ ಹಕ್ಕುಗಳ ರಕ್ಷಣೆ, ಸಮಾನತೆ ಹಾಗೂ ಬ್ರಿಟಿಷರಿಂದ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಈ ಧ್ವಜಾರೋಹಣ ನಡೆದಿತ್ತು. ಒಬ್ಬ ಧೀರ ಮಹಿಳೆಯು ಈ ಧ್ವಜವನ್ನು ವಿನ್ಯಾಸಗೊಳಿಸಿ, ದೇಶಭಕ್ತಿಗೆ ಬ್ರಿಟಿಷರು ಗೌರವ ಕೊಡಲೇಬೇಕು ಎಂಬ ಸಂದೇಶ ರವಾನಿಸಿದ್ದರು.
ಅವರ ಹೆಸರು ‘ಭಿಕಾಜಿ ರುಸ್ತುಂ ಕಮಾ’. ತನ್ನ ಪತಿ ಬ್ರಿಟಿಷರ ವಶವಾಗಿದ್ದರೂ, ಮನಸ್ಸಿಂದ ಸದಾಕಾಲ ಭಾರತ ಸ್ವಾತಂತ್ರ್ಯದ ಜಪ ಮಾಡುತ್ತಾ ಸದ್ದಿಲ್ಲದೆಯೇ ಜೀವನ ಸವೆಸಿದ ಸಾಧಕಿ ಇವರು. ದಾದಾಭಾಯಿ ನವರೊಜಿ, ಲಾಲಾ ಹರ್ ದಯಾಳ್ ಮತ್ತು ಶ್ಯಾಮ್‍ಜೀ ಕೃಷ್ಣವರ್ಮಾ ಅವರ ಮಾರ್ಗದರ್ಶನದಲ್ಲಿ ಭಿಕಾಜಿ ಅವರು ಪ್ಯಾರಿಸ್‍ನಲ್ಲಿ ಇಂಡಿಯನ್ ಸೊಸೈಟಿ ಸ್ಥಾಪಿಸಿ ಸಂಘಟನೆಗೆ ನಾಂದಿ ಹಾಡಿದ್ದರು.
ಕ್ರಾಂತಿಕಾರಿ ಸಾಹಿತ್ಯ ರಚಿಸಿ ಬ್ರಿಟಿಷರ ವಿರುದ್ಧದ ಕಿಚ್ಚನ್ನು ಪ್ರಜ್ವಲಿಸಿದ್ದರು. 1935ರಲ್ಲಿ ಯುರೋಪ್‍ನಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ, ಮುಂಬಯಿ ಮರಳಿದ ಭಿಕಾಜಿ ಅವರು 1936ರ ಆ. 13ರಂದು ಮೃತಪಟ್ಟರು.