ಚಳಿಗಾಲ ಬಂದಾಗಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಚಳಿಯ ಆಟ ಬಹು ಜೋರಾಗಿದೆ. ಅಸ್ತಮಾ ಸಮಸ್ಯೆ ಇರುವವರಂತೂ ಈ ಅವಧಿಯಲ್ಲಿ ಬಲು ಪ್ರಯಾಸ ಪಡಬೇಕಾಗುತ್ತದೆ. ಕೆಮ್ಮು, ಆಯಾಸ, ಕಫ ಕಟ್ಟುವುದು ಈ ಸಮಯದಲ್ಲಿ ಕಂಡು ಬರುವ ಸಾಮಾನ್ಯ ಲಕ್ಷಣಗಳು. ಇದನ್ನು ತಡೆಗಟ್ಟಲು ಹೀಗೆ ಮಾಡಿ.
ಚಳಿಗಾಲದಲ್ಲಿ ಕಡ್ಡಾಯವಾಗಿ ಅರ್ಧ ಗಂಟೆಯನ್ನು ವ್ಯಾಯಾಮ, ಯೋಗಾಭ್ಯಾಸಕ್ಕೆ ಮೀಸಲಿಡಿ. ಪ್ರಾಣಾಯಾಮ ಮಾಡಿ. ಬೆಳಗಿನ ಬಿಸಿಲಿಗೆ ಮೈಯೊಡ್ಡಿ ನಿಂತರೆ ಶೀತ, ಅಲರ್ಜಿಯಂಥ ಸಮಸ್ಯೆಗಳು ದೂರವಾಗುತ್ತದೆ.
ದಪ್ಪಗಿನ ಮೈಮುಚ್ಚುವ ಉಡುಪುಗಳನ್ನೇ ಧರಿಸಿ. ಪಾದಗಳನ್ನು ಬೆಚ್ಚಗಿರಿಸಿಕೊಳ್ಳಿ. ಶೀತ ಹಾಗೂ ಅಲರ್ಜಿಕಾರಕ ಅಂಶಗಳಿಂದ ದೂರವಿರಿ. ಐಸ್ ಕ್ರೀಮ್, ಜ್ಯೂಸ್ ತಿನ್ನುವುದು ಹಾಗೂ ಮಕ್ಕಳಿಗೆ ತಿನ್ನಿಸುವುದು ಬೇಡವೇ ಬೇಡ.
ಮಲಬದ್ಧತೆ ಆಗದಂತೆ ನೋಡಿಕೊಳ್ಳಿ. ವಿಟಮಿನ್ ಸಿ ಹೆಚ್ಚಿರುವ ಆಹಾರ ಸೇವಿಸಿ. ಮಲಗುವ ಮುನ್ನ ಒಂದು ಚಮಚ ಜೇನುತುಪ್ಪ ಸೇವಿಸಿದರೆ ರಾತ್ರಿ ಕೆಮ್ಮು ದಮ್ಮುವಿನ ಸಮಸ್ಯೆಗಳು ಕಾಡುವುದಿಲ್ಲ.
ಬಿಸಿನೀರಿಗೆ ಶುಂಠಿ ಜಜ್ಜಿ ಹಾಕಿ ಕುದಿಸಿ ಕುಡಿದರೆ, ಹಾಲಿಗೆ ಚಿಟಿಕೆ ಅರಿಶಿನ ಉದುರಿಸಿ ಕುಡಿದರೆ ಕಫ ಕಟ್ಟುವುದಿಲ್ಲ. ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸುವುದರಿಂದ ಶ್ವಾಸಕೋಶ ಸ್ವಚ್ಛವಾಗಿರುತ್ತದೆ.