ಇನ್‌ಸ್ಟಾಗ್ರಾಂನಲ್ಲಿ ಐದು ದಶಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದ ’ವರ್ಲ್ಡ್ ರೆಕಾರ್ಡ್ ಎಗ್’ ಪೇಜ್ 2019ರಲ್ಲಿ ಮೊಟ್ಟೆಯೊಂದರ ಸರಳ ಚಿತ್ರವೊಂದನ್ನು ಪೋಸ್ಟ್ ಮಾಡಿ ದಾಖಲೆಯೊಂದನ್ನು ಮುರಿದಿತ್ತು.
ಈ ಚಿತ್ರಕ್ಕೆ ಜನರು ವಿಪರೀತ ಲೈಕ್ ಒತ್ತಿದ ಕಾರಣ ಇನ್‌ಸ್ಟಾಗ್ರಾಂನಲ್ಲಿ ಸಾರ್ವಕಾಲಿಕ ಮಟ್ಟದಲ್ಲಿ ಎರಡನೇ ಅತ್ಯಂತ ಹೆಚ್ಚು ಲೈಕ್ಸ್ ಪಡೆದ ಪೋಸ್ಟ್ ಅದಾಗಿತ್ತು. ಆದರೆ ಈಗ ’ವರ್ಲ್ಡ್ ರೆಕಾರ್ಡ್ ಎಗ್’ ಈ ಪೋಸ್ಟ್ ಡಿಲೀಟ್ ಮಾಡಿಬಿಟ್ಟಿದೆ.
ಒಂದು ಕಾಲದಲ್ಲಿ ಪರಿಪೂರ್ಣ ಮೊಟ್ಟೆಯ ಚಿತ್ರವಿದ್ದ ಜಾಗದಲ್ಲೀಗ ಖಾಲಿ ಫೋಟೋ ಇದ್ದು, “ಮೊಟ್ಟೆ ಎಲ್ಲಿ ಹೋಯಿತು?” ಎಂದು ಕ್ಯಾಪ್ಷನ್ ಹಾಕಲಾಗಿದೆ. ಕೈಲಿ ಜೆನ್ನರ್‌ರನ್ನೂ ಹಿಂದಿಕ್ಕಿ ಎರಡನೇ ಅತಿ ಹೆಚ್ಚು ಲೈಕ್ಸ್ ಪಡೆದ ಆ ಮೊಟ್ಟೆಯ ಚಿತ್ರ ಎಲ್ಲಿ ಹೋಯಿತು ಎಂದು ನೆಟ್ಟಿಗರ ತಲೆಗೆ ಹೀಗೆ ಹುಳ ಬಿಡಲಾಗಿದೆ. 2022ರ ಫೀಫಾ ವಿಶ್ವಕಪ್ ಜಯಿಸಿ ಟ್ರೋಫಿ ಹಿಡಿದಿರುವ ಲಿಯೋನೆಲ್ ಮೆಸ್ಸಿಯ ಚಿತ್ರ ಮೊಟ್ಟೆಯ ದಾಖಲೆ ಮುರಿದಿದೆ.
ಇದೀಗ ಮೊಟ್ಟೆಯ ನಾಪತ್ತೆ ಕೂಡಾ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ತಲೆಗೆ ಕೆಲಸ ಕೊಟ್ಟಿದ್ದು, ಮುಂದೆ ಯಾವ ಚಿತ್ರ ಪೋಸ್ಟ್ ಆಗಲಿದೆ ಎಂದು ಚಿಂತಿಸುವಂತೆ ಮಾಡಿದೆ.
ಇನ್‌ಸ್ಟಾಗ್ರಾಂನಲ್ಲಿ ಅತ್ಯಂತ ಹೆಚ್ಚು ಲೈಕ್ ಆದ ಚಿತ್ರವಾಗಬೇಕೆಂಬ ಉದ್ದೇಶದಿಂದ 2019ರಲ್ಲಿ ಹೀಗೊಂದು ಮೊಟ್ಟೆಯ ಚಿತ್ರವನ್ನು ಪೋಸ್ಟ್ ಮಾಡಲಾಗಿತ್ತು. ಕೂಡಲೇ ವೈರಲ್ ಆಗಿದ್ದ ಮೊಟ್ಟೆಯ ಈ ಚಿತ್ರ ಕೈಲಿ ಜೆನ್ನರ್ ತನ್ನ ಮೊದಲ ಮಗುವಿನ ಜನ್ಮದ ಸಂದರ್ಭದಲ್ಲಿ ತೆಗೆಸಿದ್ದ ಫೋಟೋಗೆ ಸಿಕ್ಕ ಲೈಕ್‌ಗಳನ್ನೂ ಹಿಂದಿಕ್ಕಿ ಕೆಲವೇ ದಿನಗಳಲ್ಲಿ 5 ಕೋಟಿಗೂ ಹೆಚ್ಚು ಲೈಕ್ಸ್‌ಗೆ ಭಾಜನವಾಗಿತ್ತು.
ಈ ಮಟ್ಟದ ಜನಪ್ರಿಯತೆ ಪಡೆಯುವುದರೊಂದಿಗೆ ಈ ಮೊಟ್ಟೆಯ ಅನೇಕ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿತ್ತು.