ಇಂದು ಮೊಬೈಲ್ ಫೋನ್ಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ನಾವು ಎಲ್ಲಿಗೆ ಹೋದರೂ ಅದನ್ನು ನಮ್ಮೊಂದಿಗೆ ಕೊಂಡೊಯ್ಯುತ್ತೇವೆ. ಮೊಬೈಲ್ ಕೈಯಲ್ಲಿ ಇಲ್ಲ ಅಂದ್ರೆ ಏನೋ ಕಳೆದುಕೊಂಡಂತೆ ಆಗುತ್ತದೆ.
ತಂತ್ರಜ್ಞಾನವು ನಮ್ಮ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುತ್ತಿರುವುದರಿಂದ, ಮೊಬೈಲ್ ಫೋನ್ಗಳು ಸ್ಮಾರ್ಟ್ ಆಗಿವೆ. ಮೊಬೈಲ್ ಫೋನ್ ನಲ್ಲೇ ಆಹಾರ ಆರ್ಡರ್ ಮಾಡುವುದು. ನಿಮಗೆ ಬೇಕಾದವರ ಸ್ಥಳವನ್ನು ಟ್ರ್ಯಾಕ್ ಮಾಡುವುದು, ನಿಮ್ಮ ಸ್ನೇಹಿತರೊಂದಿಗೆ ಚಾಟ್ ಮಾಡುವುದು ಸೇರಿದಂತೆ ಹಲವು ವೈಶಿಷ್ಟ್ಯಗಳ ತುಂಬಿವೆ. ಆದರೆ, ಸ್ಮಾರ್ಟ್ಫೋನ್ ಎಂದು ಕರೆಯುವ ಮೊದಲು ಇದನ್ನು ಸೆಲ್ ಫೋನ್ಗಳು ಅಂತಾ ಕರೆಯುತ್ತಿದ್ದರು ಎಂಬುದು ನಿಮಗೆ ತಿಳಿದಿದೆಯೇ?
ಹೌದು, ಮೊಬೈಲ್ ಫೋನ್ಗಳನ್ನು ಸೆಲ್ ಫೋನ್ ಎಂದು ಕೂಡ ಕರೆಯುತ್ತಾರೆ ಎಂಬುದನ್ನು ನೀವು ತಿಳಿದಿರಬೇಕು. ಆದರೆ, ಇದರ ಹಿಂದಿನ ಕಾರಣ ಏನು ಗೊತ್ತಾ? ಬನ್ನಿ ಈ ಬಗ್ಗೆ ತಿಳಿದುಕೊಳ್ಳೋಣ…..
ಮುಂದೊಂದು ದಿನ ಸ್ಮಾರ್ಟ್ಫೋನ್ಗಳು ಬರುತ್ತವೆಯೆಂದು ಯಾರೂ ಕೂಡ ಯೋಚಿಸದ ಸಮಯವಿತ್ತು. ಕ್ವೆರ್ಟಿ ಕೀಪ್ಯಾಡ್ ಹೊಂದಿರುವ ಫೋನ್ಗಳು ಸಹ ಅಸ್ತಿತ್ವದಲ್ಲಿಲ್ಲದ ಸಮಯದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಒಂದೇ ಸಂಖ್ಯೆಯ ಬಟನ್ನಲ್ಲಿ ಹಲವು ಅಕ್ಷರಗಳನ್ನು ಹೊಂದಿರುವ ಫೋನ್ಗಳ ಕುರಿತು ಈಗ ಹೇಳುತ್ತಿದ್ದೇವೆ. ಅಕ್ಷರವನ್ನು ಟೈಪ್ ಮಾಡಲು ಒಂದೇ ಬಟನ್ ಅನ್ನು ಹಲವಾರು ಬಾರಿ ಒತ್ತಬೇಕಾಗಿತ್ತು. ಈ ಫೋನ್ಗಳು ಸಣ್ಣ ಪರದೆ ಹೊಂದಿತ್ತು. ಕಡಿಮೆ ಮೆಮೊರಿ ಮತ್ತು ಕೆಲವು 2ಡಿ ಆಟಗಳನ್ನಷ್ಟೇ ಹೊಂದಿದ್ದವು. ಆ ಫೋನ್ಗಳನ್ನು ಕೇವಲ ಕರೆ ಮಾಡಲು ಅಥವಾ ಎಸ್ಎಂಎಸ್ ಕಳುಹಿಸಲು ಮಾತ್ರ ಬಳಸಲಾಗುತ್ತಿತ್ತು.
ಸೆಲ್ಯುಲಾರ್ ನೆಟ್ವರ್ಕ್ಗಳ ಪರಿಕಲ್ಪನೆಯಿಂದ ಫೋನ್ ತನ್ನ ಹೆಸರನ್ನು ಪಡೆದುಕೊಂಡಿದೆ. ಸಂಪರ್ಕವನ್ನು ಒದಗಿಸಲು, ಹಲವಾರು ನೆಟ್ವರ್ಕ್ ಟವರ್ಗಳನ್ನು ವಿವಿಧ ಸ್ಥಳಗಳಲ್ಲಿ ನೆಲದ ಮೇಲೆ ಸ್ಥಾಪಿಸಲಾಯಿತು. ಈ ಟವರ್ಗಳ ಎಣಿಕೆಯು ನಿರ್ದಿಷ್ಟ ಪ್ರದೇಶದ ಫೋನ್ ಬಳಕೆದಾರರನ್ನು ಆಧರಿಸಿದೆ.
ಸೆಲ್ ಎಂದು ಏಕೆ ಕರೆಯಲಾಯಿತು ?
1947 ರಲ್ಲಿ ಬೆಲ್ ಲ್ಯಾಬ್ಸ್ನ ಡೌಗ್ಲಾಸ್ ಎಚ್. ರಿಂಗ್ ಮತ್ತು ಡಬ್ಲ್ಯೂ. ರೇ ಯಂಗ್ ಸೆಲ್ಯುಲಾರ್ ಟೆಲಿಫೋನ್ ನೆಟ್ವರ್ಕ್ ಅನ್ನು ಸ್ಥಾಪಿಸುವ ಯೋಜನೆಗಳನ್ನು ಮಾಡಿದಾಗ ಸೆಲ್ ಎಂಬ ಹೆಸರಿಡಲಾಯಿತು. ಈ ಜೋಡಿಯು ವೈರ್ಲೆಸ್ ಟವರ್ ಅಥವಾ ನೆಟ್ವರ್ಕ್ನ ವಿನ್ಯಾಸವನ್ನು ಸಿದ್ಧಪಡಿಸುವಾಗ, ಅದರ ವ್ಯಾಪ್ತಿಯ ನಕ್ಷೆಯು ಮಾನವ ದೇಹದಲ್ಲಿ ಇರುವ ಜೈವಿಕ ಕೋಶದಂತೆ ಕಾಣುತ್ತದೆ. ಅದಕ್ಕಾಗಿಯೇ ಅವರು ಸೆಲ್ಯುಲಾರ್ ಪದವನ್ನು ಆಯ್ಕೆ ಮಾಡಿದರು. ವೈರ್ಲೆಸ್ ನೆಟ್ವರ್ಕ್ನಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಫೋನ್ಗಳು ಸೆಲ್ಯುಲಾರ್ ಫೋನ್ಗಳು ಅಥವಾ ಸೆಲ್ ಫೋನ್ಗಳು ಎಂದು ಕರೆಯಲ್ಪಟ್ಟವು.