ಚಳಿಗಾಲದಲ್ಲಿ ಕೈ ಮತ್ತು ಕಾಲ್ಬೆರಳುಗಳು ಊದಿಕೊಳ್ಳುವುದು ಸಾಮಾನ್ಯ. ಚಳಿ ಹೆಚ್ಚಾದರೆ ಸಮಸ್ಯೆ ಹೆಚ್ಚು. ಚಳಿಗೆ ನಿಮ್ಮ ಕೈಕಾಲುಗಳು ಊದಿಕೊಂಡಿದ್ದರೆ ಪ್ರತ್ಯೇಕ ಔಷಧಿ ಪಡೆಯುವ ಅಗತ್ಯವಿಲ್ಲ. ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.
ಚಳಿಗಾಲದಲ್ಲಿ ಮನೆಯ ನೆಲ ಹೆಚ್ಚು ತಂಪಾಗಿರುವ ಕಾರಣ ಓಡಾಡುವುದು ಕಷ್ಟ. ಬರಿಗಾಲಿನಲ್ಲಿ ಓಡಾಡುವ ಬದಲು ಸಾಕ್ಸ್ ಧರಿಸಿ.
ನಿಂಬೆಹಣ್ಣಿನ ಬಳಕೆಯಿಂದ ಚಳಿಯಿಂದಾದ ಊತವನ್ನು ಕಡಿಮೆ ಮಾಡಬಹುದು. ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಹನಿ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಹತ್ತಿ ಅಥವಾ ಬಟ್ಟೆಯ ಸಹಾಯದಿಂದ ಈ ನೀರನ್ನು ಊತದ ಜಾಗಕ್ಕೆ ಹಚ್ಚಿ.
ಕೈ ಮತ್ತು ಕಾಲ್ಬೆರಳುಗಳ ಊತವನ್ನು ಕಡಿಮೆ ಮಾಡಲು ಸಾಸಿವೆ ಎಣ್ಣೆಯಲ್ಲಿ ಒಂದು ಚಮಚ ಕಲ್ಲು ಉಪ್ಪನ್ನು ಹಾಕಿ ಬಿಸಿ ಮಾಡಿ. ಬೆಚ್ಚಗಿರುವ ಈ ಎಣ್ಣೆಯನ್ನು ಊತವಿರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ಊದಿಕೊಂಡ ಜಾಗವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಅರಿಶಿನವು ಔಷಧೀಯ ಗುಣಗಳಿಂದ ಕೂಡಿದ್ದು ಕಾಲಿನ ಬಾವು, ತುರಿಕೆ ಅಥವಾ ನೋವಿಗೆ ಬಳಸಲಾಗುತ್ತದೆ. ಕಾಲ್ಬೆರಳುಗಳಲ್ಲಿ ಊತ ಮತ್ತು ನೋವಿದ್ದರೆ ಆಲಿವ್ ಎಣ್ಣೆಗೆ ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ ಮಿಶ್ರಣವನ್ನು ಮಾಡಿ. ಆ ಮಿಶ್ರಣವನ್ನು ಊದಿಕೊಂಡ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯದವರೆಗೆ ಹಾಗೆಯೇ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ತೆಂಗಿನ ಎಣ್ಣೆ, ಎಲ್ಲಾ ನೋವಿಗೂ ರಾಮಬಾಣದಂತೆ ಕೆಲಸ ಮಾಡುತ್ತದೆ. ತೆಂಗಿನ ಎಣ್ಣೆಗೆ ಕರ್ಪೂರವನ್ನು ಪುಡಿ ಮಾಡಿ ಹಾಕಿ ಊತ ಮತ್ತು ನೋವು ಇರುವ ಜಾಗಕ್ಕೆ ಹಚ್ಚಿ. ಇದು ನೋವು ಮತ್ತು ಊತವನ್ನು ಕಡಿಮೆ ಮಾಡುವ ಉತ್ತಮ ಔಷಧಿಯಾಗಿದೆ.
ಈರುಳ್ಳಿ ಔಷಧೀಯ ಗುಣಗಳನ್ನು ಹೊಂದಿದೆ. ಇದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಾಲುಗಳಲ್ಲಿ ತುರಿಕೆ ಇದ್ದಲ್ಲಿ ಈರುಳ್ಳಿಯ ರಸವನ್ನು ಹಚ್ಚಿ ಸ್ವಲ್ಪ ಸಮಯದ ನಂತರ ಶುದ್ಧ ನೀರಿನಿಂದ ತೊಳೆಯಿರಿ.