ಕಲಬುರಗಿ: ಮುಧೋಳ ಮತ್ತು ಬೆಳಗಾವಿಯಲ್ಲಿ ರೆಮ್ ಡೆಸಿವಿರ್ ಉತ್ಪಾದನೆಗೆ ಅನುಮತಿ ಸಿಕ್ಕಿದ್ದು, ಶೀಘ್ರವೇ ಉತ್ಪಾದನೆ ಆರಂಭಿಸಲಿವೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಧೋಳ ಮತ್ತು ಬೆಳಗಾವಿಯಲ್ಲಿ ರೆಮ್ ಡೆಸಿವಿರ್ ಉತ್ಪಾದನೆಗೆ ಅನುಮತಿ ದೊರೆತಿದೆ. ದೇಶದಲ್ಲಿ ಈ ಹಿಂದೆ ರೆಮ್ ಡೆಸಿವರ್ ಉತ್ಪಾದನೆಗೆ ಕೇವಲ ಎರಡು ಕಡೆ ಅನುಮತಿ ನೀಡಲಾಗಿತ್ತು. ಇತ್ತೀಚಿಗೆ ಕೋವಿಡ್ ಸೋಂಕಿತರ ಚಿಕಿತ್ಸೆಗೆ ರೆಮ್ ಡೆಸಿವರ್ ಇಂಜೆಕ್ಷನ್ ಗೆ ಹೆಚ್ಚಿನ ಬೇಡಿಕೆ ಬಂದ ಕಾರಣ ದೇಶದಾದ್ಯಂತ 20 ಕಡೆ ರೆಮ್ ಡೆಸಿವರ್ ಇಂಜೆಕ್ಷನ್ ಉತ್ಪಾದನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದರು.
ರಾಜ್ಯದ ಮುಧೋಳ ಮತ್ತು ಬೆಳಗಾವಿಯ ಅನಂದ ಫಾರ್ಮಾ ಸಂಸ್ಥೆಯ ಎರಡು ಯುನಿಟ್ ಗಳು ಸೇರಿವೆ. ಈ ಘಟಕಗಳು ಮೇ 17 ರಿಂದ ಉತ್ಪಾದನೆ ಆರಂಭಿಸಲಿದ್ದು, ರಾಜ್ಯದಲ್ಲಿ ರೆಮಿಡಿಸಿವಿರ್ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವರು ತಿಳಿಸಿದರು.
ಸಿಟಿ ಸ್ಕ್ಯಾನ್ ದರ ನಿಯಮ ಉಲ್ಲಂಘಿಸಿದರೆ ಕ್ರಮ:
ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನ್ ಸೇವೆಗೆ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಈಗಾಗಲೇ ಆದೇಶಿಸಿದೆ. ಸ್ಕ್ಯಾನ್ ಗೆ ಬರುವ ರೋಗಿಗಳಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ಅವರು ಎಚ್ಚರಿಕೆ ನೀಡಿದರು. ಹೆಚ್ಚಿನ ದರ ವಿಧಿಸುವ ಆಸ್ಪತ್ರೆಗಳ ಮೇಲೆ ನಿಗಾ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.