ಕೋಲ್ಕತ್ತಾ: ಇಂದು ರಾತ್ರಿ ಬಾಂಗ್ಲಾದ ಕರಾವಳಿಗೆ ರೆಮಲ್ ಚಂಡಮಾರುತ ಅಪ್ಪಳಿಸಲಿದ್ದು, ಬಾಂಗ್ಲಾದೇಶ-ಪಶ್ಚಿಮ ಬಂಗಾಳ ಮಧ್ಯೆ ಹಾದು ಹೋಗಲಿದೆ.
ರೆಮಲ್ ಚಂಡಮಾರುತ ಹಿನ್ನೆಲೆಯಲ್ಲಿ ಗಾಳಿ ಗಂಟೆಗೆ 110ರಿಂದ 120 ಕಿ.ಮೀ ವೇಗದಲ್ಲಿ ಬೀಸಲಿದೆ. ಈಗಾಗಲೇ ಪಶ್ಚಿಮ ಬಂಗಾಳದ ಬಹುತೇಕ ಕಡೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಕಟೆಚ್ಚರ ವಹಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಕೋಲ್ಕತ್ತಾ ವಿಮಾನ ನಿಲ್ದಾಣವನ್ನು 21 ಗಂಟೆಗಳ ಕಾಲ ಬಂದ್ ಮಾಡಲಾಗುತ್ತಿದೆ. ಏರ್ ಪೋರ್ಟ್ ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಹಲವು ರೈಲು ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಕೋಸ್ಟ್ ಗಾರ್ಡ್, ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಸ್ಥಳೀಯ ತಂಡ ಸನ್ನದ್ಧವಾಗಿದೆ. ಕರಾವಳಿ ತಟದ ಮೀನುಗಾರರು, ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ರೆಮಲ್ ಚಂಡ ಮಾರುತದ ಪರಿಣಾಮ ಈಶಾನ್ಯ ರಾಜ್ಯಗಳ ಮೇಲೂ ಬೀರಲಿದೆ. ಒಡಿಶಾ, ಮಿಜೋರಾಂ, ತ್ರಿಪುರಾ, ಮೆಘಾಲಯ, ಅಸ್ಸಾಂ, ದಕ್ಷಿಣ ಮಣಿಪುರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.