
ಕೊಲ್ಕತ್ತಾ: ರೆಮಲ್ ಚಂಡಮಾರುತ ಆರ್ಭಟಕ್ಕೆ 22 ಜನ ಬಲಿಯಾಗಿದ್ದಾರೆ. ಬಾಂಗ್ಲಾದೇಶದಲ್ಲಿ 16, ಪಶ್ಚಿಮ ಬಂಗಾಳದಲ್ಲಿ 6 ಜನ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.
ರೆಮಲ್ ಚಂಡಮಾರುತದಿಂದಾಗಿ 30,000 ಮನೆಗಳಿಗೆ ಹಾನಿಯಾಗಿದೆ. ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿ ಅಪಾರ ಮೌಲ್ಯದ ಆಸ್ತಿಗೆ ಹಾನಿಯಾಗಿದೆ. 1438 ಆರೈಕೆ ಕೇಂದ್ರಗಳಲ್ಲಿ 2.80 ಲಕ್ಷ ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ.
ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ನಡುವಿನ ಸಾಗರ ದ್ವೀಪ ಪ್ರದೇಶಕ್ಕೆ 135 ಕೆ.ಮೀ. ವೇಗದಲ್ಲಿ ರೆಮಲ್ ಚಂಡಮಾರುತ ಅಪ್ಪಳಿಸಿದೆ. ದಕ್ಷಿಣ 24 ಪರಗಣ, ಸಾಗರ ದ್ವೀಪ, ಸುಂದರ ಬನ, ಕಾಕಾ ದ್ವೀಪ, ಪೂರ್ವ ಮಿಡ್ನಾಪುರ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಹಾನಿಯಾಗಿದೆ. ಬಿರುಗಾಳಿ ಮಳೆ ಅಬ್ಬರಕ್ಕೆ 30,000ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಕಡೆ ದೂರವಾಣಿ ಸಂಪರ್ಕ ಕಡಿತವಾಗಿದೆ. ಒಂದು ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.