ನವದೆಹಲಿ: ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶೇಷ ಒತ್ತು ನೀಡಿದೆ. ಅದರಲ್ಲಿಯೂ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಬಿಹಾರ, ಓಡಿಶಾಗಳಲ್ಲಿರುವ ಹಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಬಜೆಟ್ ನಲ್ಲಿ ಯೋಜನೆ ಘೋಷಿಸಿದೆ.
ಗಯಾದ ಮಹಾಬೋಧಿ ದೇವಾಲಯಕ್ಕೆ ಕಾರಿಡಾರ್ ನಿರ್ಮಾಣ ಮಾಡಲಾಗುವುದು. ಗಯಾದ ವಿಷ್ಣುಪಾದ ದೇವಾಲಯವನ್ನು ವಿಶ್ವದರ್ಜೆಯ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. ಈ ನಿಟ್ಟಿನಲ್ಲಿ ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್ ಮಾದರಿಯಲ್ಲಿಯೇ ಇಲ್ಲಿಯೂ ಕಾರಿಡಾರ್ ನಿರ್ಮಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಬಿಹಾರದ ರಾಜಗಿರಿ ಜೈನ ಮಂದಿರ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಲಾಗುವುದು. ನಳಂದವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ನಳಂದ ವಿಶ್ವವಿದ್ಯಾಲಯ ಪುನರುಜ್ಜೀವನಗೊಳಿಸಲು ವಿಶೇಷ ಅನುದಾನ ನೀಡಲಾಗುವುದು ಎಂದರು.
ಒಡಿಶಾದ ರಮಣೀಯ ದೇವಾಲಯಗಳು, ಕರಕುಶಲತೆ, ವನ್ಯಜೀವಿಗಳು, ಅಲ್ಲಿನ ವೈಶಿಷ್ಟ್ಯತೆಗಳ ನಿಟ್ಟಿನಲ್ಲಿಯೂ ಅಲ್ಲಿನ ಸ್ಥಳಗಳನ್ನು ಪ್ರವಾಸಿ ತಾಣ ಮಾಡಲಾಗುವುದು ಎಂದು ಕೇಂದ್ರ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.