ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜ್ಯ ಮಹಿಳಾ ಆಯೋಗ ನೀಡಿದ್ದ ನೋಟಿಸ್ ಗೆ ಹೈಕೋರ್ಟ್ ತಡೆ ನೀಡಿದೆ.
ನೋಟಿಸ್ ಪ್ರಶ್ನಿಸಿ ಕುಮಾರಸ್ವಾಮಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಕೈಗೆತ್ತಿಕೊಂಡಿದೆ. ಈ ವೇಳೆ ಕುಮಾರಸ್ವಾಮಿ ಅವರ ವಕೀಲರು, ಮಹಿಳಾ ಆಯೋಗ ಕುಮಾರಸ್ವಾಮಿಯವರಿಗೆ ನೋಟಿಸ್ ನೀಡಿ ಖುದ್ದು ಹಾಜರಾಗುವಂತೆ ತಿಳಿಸಿದೆ. ಆದರೆ ಈ ನೋಟಿಸ್ ಪೂರ್ವಗ್ರಹ ಪೀಡಿತವಾಗಿದೆ. ಸ್ವಾಭಾವಿಕ ನ್ಯಾಯ ತತ್ವಗಳಿಗೆ ವಿರುದ್ಧವಾಗಿದ್ದು, ಇದನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಅವರ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿ ಮಹಿಳಾ ಆಯೋಗ ನೀಡಿದ್ದ ನೋಟಿಸ್ ಗೆ ತಡೆ ನೀಡಿದೆ.