ನವದೆಹಲಿ: ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಗೆ ಸಿಗುತ್ತಿದ್ದ ಇಂಡೆಕ್ಸೇಷನ್ ರದ್ದುಪಡಿಸಲಾಗಿದ್ದು, ಇದೀಗ ತಿದ್ದುಪಡಿ ಮಾಡಲಾಗಿದೆ. ಜುಲೈ 23ಕ್ಕೆ ಮೊದಲು ಖರೀದಿಸಿದ ಆಸ್ತಿಗೆ ಇಂಡೆಕ್ಸೇಷನ್ ಬಳಸಿ ಶೇಕಡ 20ರ ದರದಲ್ಲಿ ತೆರಿಗೆ ಪಾವತಿಸುವ ಅಥವಾ ಇಂಡೆಕ್ಸೇಷನ್ ಇಲ್ಲದೆ ಶೇಕಡ 12.5ರ ದರದಲ್ಲಿ ತೆರಿಗೆ ಪಾವತಿಸುವ ಅವಕಾಶವನ್ನು ಕಲ್ಪಿಸಲಾಗಿದೆ.
ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಪದ್ಧತಿ(LTCG)ಯಲ್ಲಿ ಬಜೆಟ್ ನಲ್ಲಿ ಮಾಡಿದ್ದ ಕೆಲವು ಬದಲಾವಣೆಗಳಿಗೆ ಭಾರಿ ವಿರೋಧ ವ್ಯಕ್ತವಾಗಿದ್ದರಿಂದ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಈ ಅವಕಾಶ 2024ರ ಜುಲೈ 23ಕ್ಕೆ ಮೊದಲು ಖರೀದಿಸಿದ ಆಸ್ತಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಈ ಹಿಂದೆ ಆಸ್ತಿ ಮಾಲೀಕರು ತಾವು ಆಸ್ತಿ ಖರೀದಿಸಿದಾಗ ಬಂದ ಲಾಭಕ್ಕೆ ಇಂಡೆಕ್ಸೇಷನ್ ಬಳಸಿಕೊಂಡು ಅಂದರೆ ಹಣದುಬ್ಬರ ಮೈನಸ್ ಮಾಡಿ ಉಳಿದ ಲಾಭದ ಮೊತ್ತಕ್ಕೆ ಮಾತ್ರ ತೆರಿಗೆ ಪಾವತಿಸಿದರೆ ಸಾಕಿತ್ತು.
ಹೊಸ ಪ್ರಸ್ತಾಪದಲ್ಲಿ ಇಂಡೆಕ್ಸೇಷನ್ ಅವಕಾಶ ಕೈ ಬಿಟ್ಟು ಶೇಕಡ 12.5 ರಷ್ಟು ತೆರಿಗೆ ಪಾವತಿ ಪಾವತಿಸಿದರೆ ಸಾಕು ಎಂದು ಹೇಳಲಾಗಿತ್ತು. ಮೇಲ್ನೋಟಕ್ಕೆ ಇದು ಲಾಭವೆಂದು ಹೇಳಲಾಗಿದ್ದರೂ ಇದರಿಂದ ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಮೃದು ಧೋರಣೆ ತಾಳಿದೆ.