
ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ದೇಶದ ಖಾಸಗಿ ಇಂಧನ ಮಾರಾಟ ಕಂಪನಿಗಳಾದ ರಿಲಯನ್ಸ್ – ಬಿಪಿ ಮತ್ತು ರಷ್ಯಾದ ರಾಸ್ ನೆಫ್ಟ್ ಒಡೆತನದ ನಯಾರ ಎನರ್ಜಿ ಕಂಪನಿಗಳು ಮಹತ್ವದ ತೀರ್ಮಾನವನ್ನು ಕೈಗೊಂಡಿವೆ.
ಇದೇ ಮೊದಲ ಬಾರಿಗೆ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟವನ್ನು ಮಾರುಕಟ್ಟೆ ದರದಲ್ಲೇ ಮಾರಾಟ ಮಾಡಲು ತೀರ್ಮಾನಿಸಲಾಗಿದ್ದು, ಹೀಗಾಗಿ ಇನ್ನು ಮುಂದೆ ಇದರ ಲಾಭ ವಾಹನ ಮಾಲೀಕರಿಗೆ ಸಹ ಆಗಲಿದೆ.
ಈ ಮೊದಲು ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ಭಾರಿ ನಷ್ಟವನ್ನು ಅನುಭವಿಸಿದ್ದ ಈ ಕಂಪನಿಗಳು, ಸಾರ್ವಜನಿಕ ಸ್ವಾಮ್ಯದ ಇಂಧನ ಸರಬರಾಜು ಕಂಪನಿಗಳ ಸ್ಥಿರ ದರದ ಮಾರಾಟದ ಎದುರು ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಿನ ಮಟ್ಟದಲ್ಲಿ ಇರುತ್ತಿತ್ತು.