ಬೆಂಗಳೂರು : ಶಾಲಾ ಮಕ್ಕಳ ಶೂ, ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
2023-24ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ 01 ರಿಂದ 08ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ವಿತರಿಸುವ ಸಂಬಂಧ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ ಅನುದಾನ ಹಂಚಿಕೆ ಮಾಡಿ ಆಯುಕ್ತರಾದ ಡಾ.ವಿಶಾಲ್ ಆದೇಶ ಹೊರಡಿಸಿದ್ದಾರೆ.
ವಿದ್ಯಾವಿಕಾಸ ಯೋಜನೆಯಡಿ 2023-24 ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ 01 ರಿಂದ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು ವಿತರಿಸುವ ಕುರಿತು ಉಲ್ಲೇಖಿತ(1)ರ ಪತ್ರದಲ್ಲಿ ಆಡಳಿತಾತ್ಮಕ ಅನುಮತಿ ನೀಡಿ ಆದೇಶಿಸಲಾಗಿರುತ್ತದೆ. ಉಲ್ಲೇಖ-2ರ ಸರ್ಕಾರದ ಆದೇಶದಲ್ಲಿ ವಿದ್ಯಾವಿಕಾಸ ಯೋಜನೆಯಡಿ ಉಚಿತ ಶೂ ಮತ್ತು ಸಾಕ್ಸ್ ವಿತರಣೆ ಕಾರ್ಯಕ್ರಮದ ಅನುಷ್ಟಾನಕ್ಕಾಗಿ 125.00 ಕೋಟೆಗಳನ್ನು ಬಿಡುಗಡೆ ಮಾಡಿ ಆದೇಶಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಸರ್ಕಾರ ನೀಡಬೇಕಿದ್ದ ಅನುದಾನದಲ್ಲಿ 7 ಕೋಟಿ ಕಡಿತ ಮಾಡಿ ಸಾಕ್ಸ್ ಖರೀದಿಗೆ ಆದೇಶ ಹೊರಡಿಸಿದೆ.2022-23 ನೇ ಸಾಲಿನಲ್ಲಿ ಬಿಜೆಪಿ ಸರ್ಕಾರ 1 ರಿಂದ 10 ನೇ ತರಗತಿ ಮಕ್ಕಳಿಗೆ 1 ಜೊತೆ ಶೂ, ಎರಡು ಜೊತೆ ಸಾಕ್ಸ್ ಖರೀದಿಗೆ 132 ಕೋಟಿ ಹಣ ರಿಲೀಸ್ ಮಾಡಿತ್ತು. ಆದರೆ 2023-24 ನೇ ಸಾಲಿನಲ್ಲಿ 125 ಕೋಟಿ ಹಣ ಮಾತ್ರ ಬಿಡುಗಡೆ ಮಾಡಿದೆ. ಅಂದ್ರೆ 7 ಕೋಟಿ ಹಣ ಕಡಿತ ಮಾಡಿ ಶೂ, ಸಾಕ್ಸ್ ಖರೀದಿ ಮಾಡುವಂತೆ ಸುತ್ತೋಲೆ ಹೊರಡಿಸಿದೆ.
ಕಳೆದ ವರ್ಷದ ದರದಲ್ಲೇ ಶೂ ಸಾಕ್ಸ್ ಖರೀದಿ ಮಾಡುವಂತೆ ಶಾಲೆಗಳಿಗೆ ಸೂಚನೆ ನೀಡಿದೆ. 1 ರಿಂದ 5 ನೇ ತರಗತಿಗೆ 265 ರೂ, 6 ರಿಂದ 8 ನೇ ತರಗತಿಗೆ 295 ರೂ, 9-10 ನೇ ತರಗತಿಗೆ 325 ರೂ ದರ ನಿಗದಿ ಮಾಡಿದೆ. ಕಡಿಮೆ ಹಣದಲ್ಲಿ ಉತ್ತಮ ಗುಣ ಮಟ್ಟದ ಶೂ ಕೊಡಬೇಕು ಎಂದು ಎಲ್ಲಾ ಶಾಲೆಗಳಿಗೂ ಸರ್ಕಾರ ಸೂಚನೆ ನೀಡಿದೆ. ಸ್ಥಳೀಯವಾಗಿ ಶೋ ಮತ್ತು ಸಾಕ್ಸ್ ಗಳನ್ನು ಖರೀದಿಸಿ ವಿತರಿಸುವ ಜವಾಬ್ದಾರಿಯನ್ನು ಆಯಾ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ನೀಡಲಾಗಿದ್ದು, ಖರೀದಿ ಪ್ರಕ್ರಿಯೆಗೆ ಷರತ್ತು ವಿಧಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಜುಲೈ 30ರೊಳಗೆ ಒಂದು ಜೊತೆ ಉಚಿತ ಶೂ ಮತ್ತು ಎರಡು ಜೊತೆ ಸಾಕ್ಸ್ ವಿತರಿಸಲು ಸರ್ಕಾರ ಸೂಚನೆ ನೀಡಿದೆ.