ಮರೆವು ಇದನ್ನ ಒಂದು ಸಮಸ್ಯೆ ಅಥವಾ ಖಾಯಿಲೆ ಎಂದು ಎಷ್ಟೋ ಜನ ಅಂದುಕೊಳ್ಳುತ್ತಾರೆ. ವಾಸ್ತವದಲ್ಲಿ ಮರೆವು ಒಂದೊಳ್ಳೆ ಔಷಧಿ. ಅದರಲ್ಲೂ ಸಂಬಂಧದಲ್ಲಿ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಮರೆವು ಅತೀ ಅಗತ್ಯ.
* ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆ ಮಾತಿದೆ. ಅದರ ಅರ್ಥ ಇಂದಿನ ಮನಸ್ತಾಪವನ್ನು ಇಂದಿಗೆ ಮರೆತು ನಾಳೆ ಹೊಸದಾಗಿ ದಿನ ಪ್ರಾರಂಭ ಮಾಡಬೇಕು ಅಂತ. ಹೀಗಿದ್ದಾಗ ಮಾತ್ರ ಮನಸ್ಸು ಹಗುರಾಗಿ, ಹೊಸತನದಿಂದ ದಿನ ಪ್ರಾರಂಭ ಮಾಡಲು ಅನುವಾಗುತ್ತದೆ.
* ಹದಿಹರೆಯದ ಮಕ್ಕಳ ತಪ್ಪುಗಳನ್ನು ಪದೇ ಪದೇ ಅವರಿಗೆ ನೆನಪಿಸದೆ, ಒಮ್ಮೆ ಎಚ್ಚರಿಕೆ ಕೊಟ್ಟು ನೀವೂ ಮರೆತುಬಿಡುವುದು ಒಳ್ಳೆಯದು. ಮರೆಯಬೇಕಾದ್ದನ್ನು ಮತ್ತೆ ಮತ್ತೆ ಮಾತಿನ ಮೂಲಕ ಚುಚ್ಚುತ್ತಾ ಹೋದಂತೆ, ಮಕ್ಕಳಿಗೆ ತಮ್ಮ ಪೋಷಕರು ತಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂಬ ಭಾವನೆ ಉಂಟಾಗುತ್ತದೆ.
* ಹರೆಯದ ಪ್ರೀತಿ ಅನಿವಾರ್ಯವಾಗಿ ಕಡಿದುಹೋದರೆ ಅದನ್ನು ಮರೆತು ಮುಂದಿನ ಗುರಿಯ ಕಡೆ ಹೆಜ್ಜೆ ಹಾಕಲು ಮರೆವು ಬೇಕೇ ಬೇಕು.
* ಸ್ನೇಹತರು ಹಾಗೂ ಸಹೋದ್ಯೋಗಿಗಳಲ್ಲಿ ತೀರಾ ಸಲಿಗೆ ಸಾಮಾನ್ಯ. ಸಲಿಗೆ ಇಂದ ಕೆಲವೊಮ್ಮೆ ತಿಳಿದೋ ತಿಳಿಯದೆಯೋ ತಪ್ಪಾದ ಮಾತು, ಮನಸ್ತಾಪ ಉಂಟಾಗಿರುತ್ತದೆ. ಇದನ್ನೂ ಮರೆತು ಮತ್ತೆ ಮೊದಲಿನ ಹಾಗೆ ಬೆರೆತರೆ ಬಂಧ ಬಿಗಿಯಾಗಿ, ಬಹುಕಾಲ ನೆನಪಿನಲ್ಲಿ ಉಳಿಯುವ ಸಿಹಿ ನೆನಪುಗಳನ್ನು ಕೂಡಿಟ್ಟುಕೊಳ್ಳಬಹುದು.