alex Certify ತಿರಸ್ಕೃತ ಅರಣ್ಯ ಹಕ್ಕು ಕಾಯ್ದೆ ಅರ್ಜಿಗಳ ಪುನರ್ ಪರಿಶೀಲನೆ: 3 ಎಕರೆಗಿಂತ ಹೆಚ್ಚು ಒತ್ತುವರಿ ಮಾಡಿದವರ ವಿರುದ್ಧ ಕ್ರಮ: ಈಶ್ವರ್ ಖಂಡ್ರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿರಸ್ಕೃತ ಅರಣ್ಯ ಹಕ್ಕು ಕಾಯ್ದೆ ಅರ್ಜಿಗಳ ಪುನರ್ ಪರಿಶೀಲನೆ: 3 ಎಕರೆಗಿಂತ ಹೆಚ್ಚು ಒತ್ತುವರಿ ಮಾಡಿದವರ ವಿರುದ್ಧ ಕ್ರಮ: ಈಶ್ವರ್ ಖಂಡ್ರೆ

ಶಿವಮೊಗ್ಗ: ಅರಣ್ಯ ಹಕ್ಕು ಕಾಯಿದೆ ಅಡಿ ರಾಜ್ಯದಾದ್ಯಂತ ಸಲ್ಲಿಸಲಾಗಿರುವ ಬಹುತೇಕ ಅರ್ಜಿಗಳು ತಿರಸ್ಕೃತವಾಗಿದ್ದು, ಈ ಎಲ್ಲ ಅರ್ಜಿಗಳ ಪುನರ್ ಪರಿಶೀಲನೆ ಮಾಡಿ, ಅರ್ಜಿದಾರರಿಗೆ ಸ್ವಾಭಾವಿಕ ನ್ಯಾಯದ ಅಡಿಯಲ್ಲಿ ತಮ್ಮ ಹಕ್ಕು ಪ್ರತಿಪಾದಿಸಲು ಅವಕಾಶ ನೀಡಬೇಕು, ಈ ಪ್ರಕ್ರಿಯೆ ಪೂರ್ಣವಾಗುವತನಕ ಯಾರನ್ನೂ ಒಕ್ಕಲೆಬ್ಬಿಸಬಾರದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.

ಶಿವಮೊಗ್ಗದ ಅರಣ್ಯ ಇಲಾಖೆಯ ಶ್ರೀಗಂಧ ಸಭಾಂಗಣದಲ್ಲಿಂದು ನಡೆದ ಶಿವಮೊಗ್ಗ ವೃತ್ತದ ಅರಣ್ಯಾಧಿಕಾರಿಗಳೊಂದಿಗಿನ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2005ರ ಡಿಸೆಂಬರ್ 13ನೇ ತಾರೀಖಿಗೆ ಮುನ್ನ ಅರಣ್ಯವಾಸಿಗಳಾಗಿದ್ದ ಎಲ್ಲ ಬುಡಕಟ್ಟು ಜನರಿಗೆ ಅರಣ್ಯ ಹಕ್ಕು ಕಾಯಿದೆಯಡಿ ಪರಿಹಾರ ಸಿಗಲೇಬೇಕು, ಅದೇ ರೀತಿ ಇತರ ಹಿಂದುಳಿದವರು ಈ ದಿನಾಂಕಕ್ಕೆ ಮುನ್ನ ಅರಣ್ಯದಲ್ಲಿ ಜೀವನೋಪಾಯಕ್ಕಾಗಿಯೇ ನೆಲೆಸಿದ್ದಲ್ಲಿ ನಿಯಮಾನುಸಾರ ಅವರಿಗೆ ಹಕ್ಕು ನೀಡಬೇಕಾಗುತ್ತದೆ. ಪ್ರಸ್ತುತ 3 ತಲೆಮಾರು ಅಂದರೆ 75 ವರ್ಷ ಅವರು ಅಲ್ಲಿದ್ದರು ಎಂದು ಸಾಬೀತು ಪಡಿಸುವುದು ಕಷ್ಟಸಾಧ್ಯವಾಗಿದ್ದು, ಈ ನಿಯಮಕ್ಕೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

2015ರ ನಂತರದ ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ:

1978ರ ಪೂರ್ವದಲ್ಲಿ ಅರಣ್ಯ ಒತ್ತುವರಿ ಮಾಡಿರುವ ಪ್ರಕರಣಗಳ ಪೈಕಿ ಪಟ್ಟಾಭೂಮಿ ಮತ್ತು ಒತ್ತುವರಿ ಎರಡೂ ಸೇರಿ 3 ಎಕರೆ ಮೀರದವರ ಮತ್ತು ಇದೇ ಭೂಮಿಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿರುವವರ ವಿರುದ್ಧ ಕ್ರಮ ಕೈಗೊಳ್ಳದಂತೆ ಸರ್ಕಾರ ಈ ಹಿಂದೆಯೇ ನಿರ್ಧಾರ ಮಾಡಿದೆ. ಬಡ ಜನರಿಗೆ ತೊಂದರೆ ನೀಡದೆ, 3 ಎಕರೆಗಿಂತ ಹೆಚ್ಚಿನ ಒತ್ತುವರಿ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಈಶ್ವರ್ ಖಂಡ್ರೆ ಸೂಚನೆ ನೀಡಿದರು.

ಪ್ರಕೃತಿ ಪರಿಸರ, ಅರಣ್ಯ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಪರಿಸರವೂ ಉಳಿಯಬೇಕು, ಜೀವನೋಪಾಯವೂ ಇರಬೇಕು. ಹೀಗಾಗಿ ಹೊಸದಾಗಿ ಯಾರೇ ಅರಣ್ಯದಲ್ಲಿ ಅಕ್ರಮವಾಗಿ ಮರ ಕಡಿದು, ಒತ್ತುವರಿ ಮಾಡಿದರೆ, ನಿಯಮಾನುಸಾರ ಅನುಮತಿ ಪಡೆದು ಕ್ರಿಮಿನಲ್ ಮೊಕದ್ದಮೆ ಹೂಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶರಾವತಿ ಸಂತ್ರಸ್ತರ ಸಮಸ್ಯೆ ಚರ್ಚೆ:

ರಾಜ್ಯಕ್ಕೆ ಬೆಳಕು ನೀಡಿದ ಶರಾವತಿ ಸಂತ್ರಸ್ತರಿಗೆ ಹಕ್ಕು ಕೊಡಿಸಲು 6 ದಶಕಗಳಿಂದ ಸಾಧ್ಯವಾಗಿಲ್ಲ. ಹೀಗಾಗಿ ಅವರಿಗೆ ಸಲ್ಲಬೇಕಾದ ನೈಜ ಹಕ್ಕು ಕೊಡಿಸಲು ಎದುರಾಗಿರುವ ತೊಡಕು ನಿವಾರಿಸಲು ಸುಪ್ರೀಂಕೋರ್ಟ್ ನಲ್ಲಿ ಐ.ಎ. ಹಾಕಲಾಗಿದೆ. ಈ ಬಾರಿ ಸಂತ್ರಸ್ತರಿಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಭೂಮಿಯನ್ನು ಮಾನ್ಯ ಮಾಡಿ, ಸಂತ್ರಸ್ತರ ಸಮಸ್ಯೆ ಶೀಘ್ರ ಬಗೆಹರಿಸಲು ಉತ್ತಮ ವಕೀಲರನ್ನು ವಿಶೇಷ ಅಭಿಯೋಜಕರಾಗಿ ನೇಮಕ ಮಾಡುವಂತೆ ಸೂಚಿಸಿದರು.

ಇಂಡೀಕರಣ ಮಾಡಿಸಲು ಸೂಚನೆ:

ಕಂದಾಯ ಇಲಾಖೆಯಿಂದ ಅರಣ್ಯಕ್ಕಾಗಿ ಮತ್ತು ನೆಡುತೋಪಿಗಾಗಿ ಹಲವು ದಶಕಗಳ ಹಿಂದೆಯೇ ಭೂಮಿ ಮಂಜೂರಾಗಿದ್ದರೂ, ಹಲವು ಪ್ರಕರಣಗಳಲ್ಲಿ ಇನ್ನೂ ಇಂಡೀಕರಣ ಆಗಿಲ್ಲ, ಅದೇ ರೀತಿ ಮೀಸಲು ಅರಣ್ಯ ಪ್ರದೇಶವೂ ಇಂಡೀಕರಣ ಆಗಿಲ್ಲ. ಅಲ್ಲದೆ ಒಂದೇ ಸರ್ವೆ ನಂಬರ್ ನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಇರುವ ಕಡೆಯೂ ಅಕ್ರಮ ಮಂಜೂರಾತಿ ಆಗುತ್ತಿದೆ. ಹೀಗಾಗಿ ಕೂಡಲೇ ಅರಣ್ಯ ಎಂದು ಮ್ಯುಟೇಷನ್ ಮಾಡಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಶಾಸಕರಾದ ಶಾರದಾ ಪೂರ್ಯಾನಾಯ್ಕ್, ಆರಗ ಜ್ಞಾನೇಂದ್ರ, ಚನ್ನಬಸಪ್ಪ, ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬ್ರಿಜೇಶ್ ದೀಕ್ಷಿತ್, ಸುಭಾಷ್ ಮಲ್ಕಡೆ ಮತ್ತಿತರರು ಪಾಲ್ಗೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...