ನಿಜ ಜೀವನದ ಘಟನೆಗಳು ಕೆಲವೊಮ್ಮೆ ಚಲನಚಿತ್ರಗಳಲ್ಲಿ ತೋರಿಸುವ ಸನ್ನಿವೇಶಗಳನ್ನು ಮೀರಿಸುತ್ತದೆ. ಇದಕ್ಕೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದ ಈ ವಿಲಕ್ಷಣ ವಿವಾಹವು ಸೂಕ್ತ ಉದಾಹರಣೆಯಾಗಿದೆ.
ಮದುವೆಯ ಸಮಯದಲ್ಲಿ, ವಧು ವರನಿಗೆ ಆರತಿ ಎತ್ತಿ ಬೆಳಗಿ ನಂತರ ಅವನ ಆಶೀರ್ವಾದ ಪಡೆದಿದ್ದಾಳೆ. ಇನ್ನೇನು ಪರಸ್ಪರ ಹೂಮಾಲೆ ವಿನಿಮಯ ಮಾಡಿಕೊಳ್ಳಬೇಕು ಅನ್ನುವಷ್ಟರಲ್ಲಿ ಸಿನಿಮಾ ಶೈಲಿಯಲ್ಲಿ ಅಲ್ಲಿಗೆ ವಧುವಿನ ಮಾಜಿ ಪ್ರೇಮಿ ಎಂಟ್ರಿ ಕೊಟ್ಟಿದ್ದಾನೆ. ಮುಖಕ್ಕೆ ಸ್ಕಾರ್ಫ್ ಧರಿಸಿದ್ದ ಆತ, ನೇರವಾಗಿ ವಧುವಿನ ಬಳಿ ಬಂದು ಆಕೆಯ ಹಣೆಯ ಮೇಲೆ ಕುಂಕುಮ ಇಡಲು ಮುಂದಾಗಿದ್ದಾನೆ. ಕೂಡಲೇ ಸ್ಥಳದಲ್ಲಿ ತಳ್ಳಾಟ, ನೂಕಾಟ ಶುರುವಾಗಿದೆ,
ಮದುವೆಗೆ ಹಾಜರಾದವರೊಬ್ಬರು ಇಡೀ ಘಟನೆಯನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಗೋರಖ್ಪುರದ ಬುಧಾತ್ನ ಹರ್ಪುರದಲ್ಲಿ ಈ ಘಟನೆ ನಡೆದಿದೆ. ವಧು ತನ್ನ ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡಿದ್ದರೂ ಕೂಡ ಆತ ಬಲವಂತವಾಗಿ ಸಿಂಧೂರವಿಟ್ಟಿದ್ದಾನೆ.
ಮೇಲ್ನೋಟಕ್ಕೆ, ಆ ವ್ಯಕ್ತಿ ವಧುವಿನ ಮಾಜಿ ಪ್ರೇಮಿ ಎಂದು ಹೇಳಲಾಗಿದೆ. ಅವನು ಕೆಲವು ತಿಂಗಳ ಹಿಂದೆ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದ. ಈ ವೇಳೆ ಈತನ ಪ್ರೇಯಸಿ ಮದುವೆಯನ್ನು ಮತ್ತೊಬ್ಬರೊಂದಿಗೆ ಮಾಡಲು ಮನೆಯವರು ನಿರ್ಧರಿಸಿದ್ದಾರೆ. ಈ ವಿಷಯ ತಿಳಿದ ಮಾಜಿ ಪ್ರೇಮಿ, ನೇರವಾಗಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟು, ಗಲಾಟೆ ಸೃಷ್ಟಿಸಿದ್ದಾನೆ.
ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಕೂಡ ತಡಮಾಡದೆ ಸ್ಥಳಕ್ಕೆ ದೌಡಾಯಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಮರುದಿನ ಯುವತಿಯು ತನಗೆ ನಿಶ್ಚಯವಾದ ವರನ ಜೊತೆಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ.
https://www.youtube.com/watch?v=xXXFZ7NheXc