ಬೆಂಗಳೂರು: ಸ್ಥಿರಾಸ್ತಿ ದಸ್ತಾವೇಜುಗಳ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿದ ಪರಿಣಾಮ ರಾಜ್ಯದಲ್ಲಿ ನೋಂದಣಿ ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಶೇಕಡ 60 ಕುಸಿತವಾಗಿದೆ.
ಅ. 28ರಿಂದ ಉಪ ನೋಂದಣಾಧಿಕಾರಿ ಕಚೇರಿಯ ಕಾವೇರಿ 2.0 ಸಾಫ್ಟ್ವೇರ್ ನಲ್ಲಿನ ಸಿಟಿಜನ್ ಲಾಗಿನ್ ನಲ್ಲಿ ಕೈಬರಹ ಮತ್ತು ಭೌತಿಕ ಖಾತಾ ಸ್ವೀಕಾರ ಸೌಲಭ್ಯ ಬಂದ್ ಮಾಡಲಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಇ- ಸ್ವತ್ತು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಆಸ್ತಿಗಳಿಗೆ ಇ- ಆಸ್ತಿ ತಂತ್ರಾಂಶದಿಂದ ಮಾಹಿತಿ ರಿಜಿಸ್ಟ್ರೇಷನ್ ಮಾಡಬೇಕಿದೆ. ಹಾಗಾಗಿ ನವೆಂಬರ್ ನಲ್ಲಿ ಶೇಕಡ 40ರಷ್ಟು ದಸ್ತಾವೇಜುಗಳನ್ನು ನೋಂದಣಿ ಕುಸಿತವಾಗಿದ್ದು, ಇದರ ಪರಿಣಾಮ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಶೇಕಡ 60ರಷ್ಟು ದಿಢೀರ್ ಕುಸಿತ ಕಂಡಿದೆ ಎನ್ನಲಾಗಿದೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಬುಧವಾರ ನಾಲ್ವರು ಸಚಿವರ ಮಹತ್ವದ ಸಭೆ ಕರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ನಗರಾಭಿವೃದ್ಧಿ, ಪೌರಾಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.