ಬೆಂಗಳೂರು: ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡದೆ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸುವ ನೋಂದಣಿ ತಿದ್ದುಪಡಿ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅನುಮೋದನೆ ನೀಡಿದ್ದಾರೆ.
ಈ ಮಸೂದೆಯನ್ನು ರಾಷ್ಟ್ರಪತಿ ಅಂಕಿತಕ್ಕೆ ರಾಜ್ಯ ಸರ್ಕಾರ ಕಳುಹಿಸಿದೆ. ಕಳೆದ ಫೆಬ್ರವರಿಯಲ್ಲಿ ವಿಧಾನ ಮಂಡಲದಲ್ಲಿ ಅನುಮೋದನೆ ಪಡೆದುಕೊಂಡಿದ್ದ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಅವರು ಕೆಲವು ಸ್ಪಷ್ಟನೆಗಳನ್ನು ಕೇಳಿ ತಿದ್ದುಪಡಿ ಮಸೂದೆಯನ್ನು ಸರ್ಕಾರಕ್ಕೆ ಮರಳಿಸಿದ್ದರು.
ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಅಂಕಿತಕ್ಕೆ ಮೀಸಲಿಟ್ಟು ನೋಂದಣಿ ಕರ್ನಾಟಕ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ರಾಷ್ಟ್ರಪತಿ ಅವರ ಅಂಕಿತಕ್ಕಾಗಿ ಮಸೂದೆಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿದೆ.