ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಸ್ತಿ ನೋಂದಣಿ ಸಂದರ್ಭದಲ್ಲಿ ಒನ್ ಟೈಮ್ ಪಾಸ್ ವರ್ಡ್ ಸೇವೆಯನ್ನು ಸರ್ಕಾರ ಹಿಂಪಡೆದುಕೊಂಡಿದೆ.
ಆಸ್ತಿ ಮಾರಾಟ, ಕ್ರಯ, ವರ್ಗಾವಣೆ, ಅಡಮಾನ ಪತ್ರ, ಮದುವೆ ನೋಂದಣಿ ಮೊದಲಾದ ದಾಖಲೆಗಳು ಕಾವೇರಿ ತಂತ್ರಾಂಶದಲ್ಲಿ ನೋಂದಣಿಯಾಗಲಿವೆ. ನೋಂದಣಿಯಲ್ಲಿನ ಅಕ್ರಮ ತಡೆಯಲು ಎರಡೂ ಕಡೆಯವರ ಮೊಬೈಲ್ ನಂಬರ್ ನಮೂದಿಸಿ ಅದಕ್ಕೆ ಬರುವ ಒಟಿಪಿ ಅಪ್ಲೋಡ್ ಮಾಡಿದ ಬಳಿಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆಯನ್ನು ನಾಲ್ಕು ತಿಂಗಳ ಹಿಂದೆ ಜಾರಿಗೆ ತರಲಾಗಿತ್ತು.
ಆದರೆ, ಕಾವೇರಿ ತಂತ್ರಾಂಶದಲ್ಲಿ ವೇಗವಿಲ್ಲದ ಕಾರಣ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ 250 ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಉದ್ದೇಶಗಳ ನೋಂದಣಿಗೆ ವಿಳಂಬವಾಗುತ್ತಿದ್ದ ಕಾರಣ ಒಟಿಪಿ ವ್ಯವಸ್ಥೆಯನ್ನು ಸರ್ಕಾರ ಹಿಂಪಡೆದಿದೆ. ಕೆಲವರಿಗೆ ಮೊಬೈಲ್ ಇಲ್ಲವಾದರೆ, ಮತ್ತೆ ಕೆಲವರಿಗೆ ಒಟಿಪಿ ಬರುವುದು ಕೂಡ ತಡವಾಗುತ್ತಿತ್ತು. ಹಾಗಾಗಿ ಒಟಿಪಿ ವ್ಯವಸ್ಥೆ ಆದೇಶವನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.