ಬೆಂಗಳೂರು : ಜಿಲ್ಲಾ ವ್ಯಾಪ್ತಿಯ ಕೆಲ ಆರೋಗ್ಯ ಸಂಸ್ಥೆಗಳು ಕೆ.ಪಿ.ಎಂ.ಇ ಕಾಯ್ದೆ, ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆ & ಎಂ.ಟಿ.ಪಿ ಕಾಯ್ದೆಗಳ ಅಡಿಯಲ್ಲಿ ನೋಂದಣಿಯನ್ನು ಹೊಂದದೇ ಅನಧಿಕೃತವಾಗಿ ಆರೋಗ್ಯ ಸಂಸ್ಥೆಯನ್ನು ನಡೆಸುತ್ತಿರುವುದು / ನಿರ್ವಹಿಸುತ್ತಿರುವುದು / ಸ್ಥಾಪಿಸಿರುವುದರ ಕುರಿತು ಕೆಲ ಸಾರ್ವಜನಿಕರು,ಜನಪ್ರತಿನಿಧಿಗಳಿಂದ ಜಿಲ್ಲಾ ಸಕ್ಷಮ ಪ್ರಾಧಿಕಾರಕ್ಕೆ ದೂರುಗಳನ್ನು ನೀಡುತ್ತಿದ್ದು ಮತ್ತು ಈ ಪ್ರಾಧಿಕಾರದ ಹಾಗೂ ಇಲಾಖೆಯ ಪ್ರಾಧಿಕೃತ ಅಧಿಕಾರಿಗಳು ಪರಿವೀಕ್ಷಣಾ ಸಂದರ್ಭದಲ್ಲಿ ಈ ಬಗ್ಗೆ ಗಮನಿಸಿ, ಅಂಥಹ ಅನಧಿಕೃತ ಆರೋಗ್ಯ ಸಂಸ್ಥೆಗಳ ವಿರುದ್ಧ ಕಾಯ್ದೆಗಳನ್ವಯ ಶಿಸ್ತು ಕ್ರಮ & ಶಾಸನ ಬದ್ಧ ಕ್ರಮಗಳನ್ನು ಕೂಡಲೇ ಕೈಗೊಳ್ಳಲಾಗಿರುತ್ತದೆ.
ದೂರು ದಾಖಲಾದ ಆರೋಗ್ಯ ಸಂಸ್ಥೆಗಳ ಕುರಿತು ಕಾಯ್ದೆಗಳನ್ವಯ ವಿಚಾರಣೆಗಳನ್ನು ನಡೆಸಿ, ತಪ್ಪಿತಸ್ಥ ಆರೋಗ್ಯ ಸಂಸ್ಥೆಗಳ ವಿರುದ್ಧ ಈಗಾಗಲೇ ಕಾನೂನು ರೀತ್ಯಾ ಜುಲ್ಮಾನೆಗಳನ್ನು ವಿಧಿಸಲಾಗಿ, ದಾವೆಗಳನ್ನು ಸಂಬಂಧಪಟ್ಟ ನ್ಯಾಯಾಲಯದಲ್ಲಿ ಹೂಡಲಾಗಿದೆ.
ಕೆ.ಪಿ.ಎಂ.ಇ ಕಾಯ್ದೆ 2007 ಕಲಂ-03 & 07, ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆ 1994 ಕಲಂ-03 & 18 ಮತ್ತು ಎಂ.ಟಿ.ಪಿ ಕಾಯ್ದೆ 1971 ಕಲಂ-04 ಅನ್ವಯ ನೋಂದಣಿಯನ್ನು ಹೊಂದದೇ ಅನಧಿಕೃತವಾಗಿ ಆರೋಗ್ಯ ಸಂಸ್ಥೆಯನ್ನು ನಡೆಸುತ್ತಿರುವ ಆರೋಗ್ಯ ಸಂಸ್ಥೆಗಳು ಕೂಡಲೇ ಕಾಯ್ದೆಗಳನ್ವಯ ನೋಂದಣಿ ಹೊಂದತಕ್ಕದ್ದು, ತಪ್ಪಿದ್ದಲ್ಲಿ ಕೂಡಲೇ ಅಂಥಹ ಸಂಸ್ಥೆಗಳನ್ನು ಕಾಯ್ದೆಗಳನ್ವಯ ಮೊಹರು ಬಂದ್ ಗೊಳಿಸಿ, ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಗಮನಕ್ಕೆ ನಿಯಮ ಬಾಹಿರವಾಗಿ ಅಂಥಹ ಆರೋಗ್ಯ ಸಂಸ್ಥೆಗಳು ನಿರ್ವಹಿಸಲ್ಪಡುತ್ತಿರುವುದು ಕಂಡು ಬಂದಲ್ಲಿ ಜಿಲ್ಲಾ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಎಂ.ಸಿ. ಸುನೀಲ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.