ಬೆಂಗಳೂರು: ರಾಜ್ಯದಲ್ಲಿ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಕೋಚಿಂಗ್ ಕೇಂದ್ರಗಳ ನೋಂದಣಿ ಕಡ್ಡಾಯವಾಗಿದೆ.
ಇದುವರೆಗೆ ನೋಂದಾಯಿಸಿಕೊಳ್ಳದ ಕೋಚಿಂಗ್ ಸೆಂಟರ್ ಗಳು ಮುಂದಿನ 15 ದಿನಗಳಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳ ನೋಂದಣಿಯನ್ನು ಸರ್ಕಾರ ಕಡ್ಡಾಯಗೊಳಿಸಿ ಆದೇಶಿಸಿರುವುದರಿಂದ ಸಂಬಂಧಿಸಿದ ಕೋಚಿಂಗ್ ಸೆಂಟರ್ ಗಳು 25 ಸಾವಿರ ರೂ. ಪಾವತಿಸಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಇಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿ ಕೋಚಿಂಗ್ ಸೆಂಟರ್ ಗಳು ನೋಂದಣಿ ಸಂಖ್ಯೆ, ಪಾನ್, ಜಿಎಸ್ಟಿ ನಂಬರ್ ಹೊಂದಿರಬೇಕು. ವಿಶಾಲ ತರಬೇತಿ ಕೊಠಡಿ, ಸುಸಜ್ಜಿತ ಗ್ರಂಥಾಲಯ, ಅರ್ಹ ವಿದ್ಯಾರ್ಹತೆ ಹೊಂದಿದ ಬೋಧಕರು, ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಸಿಸಿ ಕ್ಯಾಮೆರಾ ಅಳವಡಿಸಿರಬೇಕು. ಕಟ್ಟಡ ಕರಾರು ಒಪ್ಪಂದ, ಭದ್ರತಾ ಸಿಬ್ಬಂದಿ, ಅಗ್ನಿ ಸುರಕ್ಷತೆ, ಆದಾಯ ತೆರಿಗೆ ಸಲ್ಲಿಕೆ ಸಂಬಂಧಿಸಿದ ಎಲ್ಲ ದಾಖಲೆ ಹೊಂದಿರಬೇಕು ಎಂದು ಹೇಳಲಾಗಿದೆ.